

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಈ ಬಾರಿ 4 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ವರ್ಷ 2.5 ಲಕ್ಷ ಸದಸ್ಯರ ನೋಂದಣಿ ಮಾಡಲಾಗಿತ್ತು. ಈ ಬಾರಿ ಅದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದರು.
ಪಕ್ಷಕ್ಕೆ ಸೇರ್ಪಡೆಯಾಗುವವರು ಟೋಲ್ ಫ್ರೀ 8800002024 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ, ಲಿಂಕ್ ಬರುತ್ತದೆ. ಅದರ ಮೂಲಕ ಹೆಸರು, ವಿವರ ಕೊಟ್ಟು ಸದಸ್ಯರಾಗಬಹುದು. ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ಸೆ.11ರಿಂದ 17ರ ತನಕ ಮಹಾ ಅಭಿಯಾನ ನಡೆಯಲಿದೆ. ಪ್ರತಿ ಬೂತ್‌ನಲ್ಲಿ 250 ಸದಸ್ಯರ ನೋಂದಣಿ ಗುರಿ ಇದೆ. ಈಗಾಗಲೇ ಸದಸ್ಯರಾದವರು, 18 ವರ್ಷ ಮೇಲ್ಪಟ್ಟವರು ಬಿಜೆಪಿ ಕಚೇರಿಯಲ್ಲೂ ನೋಂದಣಿ ಮಾಡಿಸಬಹುದು ಎಂದು ಅವರು ತಿಳಿಸಿದರು.
ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಂಟು ಕಡೆ ಬಿಜೆಪಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಬಂಟ್ವಾಳ ಮತ್ತು ಉಳ್ಳಾಲದಲ್ಲಿ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಧಿಕಾರ ಪಡೆದಿದೆ ಎಂದು ಸತೀಶ್ ಕುಂಪಲ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಸ್ತೂರಿ ಪಂಜ, ಪೂಜಾ ಪೈ, ಡಾ.ಮಂಜುಳಾ ರಾವ್ ದೇವದಾಸ ಶೆಟ್ಟಿ, ನಿತೀಶ್ ಶಾಂತಿವನ, ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.