

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಸನಾತನ ಹಿಂದು ಧರ್ಮದ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಸತೀಶ್ ಜಾರಕಿಹೊಳಿ ಹಿಂದುಗಳ ಕ್ಷಮೆ ಕೊರಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಒತ್ತಾಯಿಸಿದ್ದಾರೆ.
ಪ್ರತಿ ಚುನಾವಣೆ ಸಂದರ್ಭ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುತಿರುವ ಕಾಂಗ್ರೆಸ್ ಈ ಬಾರಿ ಸತೀಶ್ ಜಾರಕಿಹೊಳಿ ಮೂಲಕ ತನ್ನ ಹಿಂದು ವಿರೋಧಿ ನಿಲುವನ್ನು ಮತ್ತೆ ಸ್ಪಷ್ಟ ಪಡಿಸಿದೆ ಎಂದು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮೊದಲ ಪ್ರಧಾನಿ ನೆಹರುವಿನಿಂದ ಪ್ರಾರಂಭವಾದ ಹಿಂದು ವಿರೋಧಿ ನೀತಿ ಸತೀಶ್ ಜಾರಕಿಹೊಳಿ ತನಕ ಮುಂದುವರಿದಿದೆ. ಕಾಂಗ್ರೆಸ್ ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಹಿಂದುಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತಿದ್ದಾರೆ. ಹಿಂದು ಎಂದರೆ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಪದ ಎಂಬ ಹೇಳಿಕೆ ನೀಡಿರುವ ಜಾರಕಿಹೊಳಿ ತನ್ನ ರಾಜಕೀಯ ಲಾಭಕ್ಕಾಗಿ ಮಾತೃ ಧರ್ಮಕ್ಕೆ ದ್ರೋಹ ಬಗೆದಿದ್ದಾರೆಂದು ಟೀಕಿಸಿದ್ದಾರೆ.
ಒಂದು ಕಡೆ ಮಗುವಿಗೆ ಚಿವುಟಿ ತೊಟ್ಟಿಲು ತೂಗುತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಖಂಡಿಸಿ ಮಾತನಾಡು ವುದರ ಬದಲು ಬಹುಸಂಖ್ಯಾತ ಹಿಂದುಗಳ ಬಹಿರಂಗ ಕ್ಷಮೆ ಕೇಳುವಂತೆ ಜಾರಕಿಹೊಳಿ ಮೇಲೆ ಒತ್ತಡ ಹಾಕಬೇಕಿತ್ತು. ಪ್ರತಿ ಹಿಂದುಗಳು ಕಾಂಗ್ರೆಸ್ ನಡೆಯನ್ನು ಗಂಭೀರವಾಗಿ ತೆಗೆದುಕೊಂಡು ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜಾರಕಿಹೊಳಿ ಹೇಳಿಕೆಗೆ ಯಾವುದೇ ಚಕಾರ ಎತ್ತದಿರುದು ಕಾಂಗ್ರೆಸ್‌ನ ನಿಜ ಬಣ್ಣ ಬಯಲು ಮಾಡಿದೆ. ಕಾಂಗ್ರೆಸ್‌ಗೆ ತಾಕತ್ತು ಇದ್ದರೆ ಹಿಂದು ಎಂಬ ಪದದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ ಜಾರಕಿಹೊಳಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ಹಿಂದುಗಳ ಬಳಿ ಮತಯಾಚನೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.