

ಕಾರವಾರ: ಹಣಕೋಣ ಸಾತೇರಿ ದೇವಿಯ ಜಾತ್ರೆಯು ಜನಸಾಗರದ ನಡುವೆ ಸೋಮವಾರ ಸಂಪನ್ನಗೊಂಡಿತು. ವರ್ಷದಲ್ಲಿ ಏಳು ದಿನ ಮಾತ್ರ ಹಣಕೋಣ ಸಾತೇರಿ ದೇವಸ್ಥಾನದ ಗರ್ಭ ಗುಡಿಯ ಬಾಗಿಲನ್ನು ತೆರೆದು ಪೂಜೆ ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಗೆ ಹರಕೆ ಅರ್ಪಿಸಲು ರಾಜ್ಯ, ಹೊರ ರಾಜ್ಯಗಳ ಲಕ್ಷಾಂತರ ಜನ ಆಗಮಿಸುತ್ತಾರೆ. ದೇವಿಗೆ ಉಡಿ ತುಂಬುತ್ತಾರೆ. ತುಲಾ ಭಾರ, ಬಂಗಾರ, ಹೀಗೆ ವಿವಿಧ ಹರಕೆ ನೀಡುತ್ತಾರೆ.
ಈ ವರ್ಷ ಸೆ.12 ರಿಂದ ದೇವಿಯ ಸಾರ್ವಜನಿಕ ದರ್ಶನ ಶುರುವಾಗಿದೆ. ಮೂರು ದಿನ ನಿರಂತರವಾಗಿ ಸರ್ಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಸಾವಿರಾರು ಜನ ಆಗಮಿಸಿ ದೇವಿಯ ದರ್ಶನ ಪಡೆದರು. ಸೋಮವಾರ ದೇವಿಯ ದರ್ಶನದ ಸರದಿ ಸಾಲು ಮುಖ್ಯ ರಸ್ತೆಯವರೆಗೂ ತಲುಪಿತ್ತು. ಊಟಕ್ಕೂ ಉದ್ದದ ಸರತಿ ಸಾಲಿತ್ತು. ನಿರೀಕ್ಷೆಗೂ ಮೀರಿ ವಾಹನಗಳು ಬಂದಿದ್ದರಿAದ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಸಮಸ್ಯೆ ಉಂಟಾಯಿತು. ಸೋಮವಾರ ಸಾಯಂಕಾಲ 5 ಗಂಟೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಈ ಬಾರಿ ಗೋವಾ ಸ್ಪೀಕರ್ ರಮೇಶ ತವಡಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಸತೀಶ ಸೈಲ್ ಸೇರಿ ಹಲವು ಗಣ್ಯರು ದೇವಿಯ ದರ್ಶನ ಪಡೆದರು.