

ಚಾಮರಾಜನಗರ: ದಟ್ಟ ಅರಣ್ಯ ಪ್ರದೇಶ ಹೊಂದಿರುವ ಗಡಿ ಜಿಲ್ಲೆ ಚಾಮರಾಜನಗರ ದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಕಿಲಗೆರೆ ಮತ್ತು ಕೊತ್ತಲವಾಡಿ ಸಮೀಪ ಮಾಯನಾಯಕನಹಳ್ಳಿ ಎಲ್ಲೆ ಬಳಿ ಫೆ.7 ಮತ್ತು 8ರಂದು ಸ್ಯಾಟಲೈಟ್ ಫೋನ್ ಬಳಸಿ ಕರೆಗಳನ್ನು ಮಾಡ ಲಾಗಿದ್ದು, ಉಗ್ರರು ಮತ್ತು ನಕ್ಸಲರ ಚಲನವಲನದ ಕರಿನೆರಳು ಆವರಿಸಿದ್ದ ಜಿಲ್ಲೆಯಲ್ಲಿ ಈ ವಿಷಯವೀಗ ಗಂಭೀರತೆ ಪಡೆದುಕೊಂಡಿದೆ.
ಮಾಯನಾಯಕನ ಹಳ್ಳಿಯ ಕಲ್ಲುಕ್ವಾರಿ ಬಳಿ ಎರಡು ಬಾರಿ ಸ್ಯಾಟಲೈಟ್ ಫೋನ್ನಿಂದ ಕರೆಗಳು ಹೋಗಿವೆ. ಬಳಕೆಯಾದ ದಿನ ಕ್ವಾರಿ ಸಮೀಪದ ಜಮೀನೊಂದರಲ್ಲಿ ಬೆಳೆದಿದ್ದ ಶುಂಠಿ ಖರೀದಿಸಲು ಕೇರಳದಿಂದ ಗ್ರಾಮಕ್ಕೆ ಬಂದಿದ್ದ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿ, ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಯಾಟಲೈಟ್ ಫೋನ್ ಬಳಕೆಯ ತನಿಖೆ ಕೈಗೊಂಡ ಪೊಲೀಸರು ಇಂಟರ್ನಲ್ ಸೆಕ್ಯೂರಿಟಿ ಡಿವಿಜನ್ (ಐಎಸ್ಡಿ) ಸಹಕಾರ ಪಡೆದು, ಕರೆ ಎಲ್ಲಿಗೆ ಮಾಡಲಾಗಿದೆ ಎಂಬುದನ್ನು ಪರಿಶೀಲನೆ ನಡೆಸಲಾಗಿದೆ. ಎನ್ಐಎ ಅಂಗ ಸಂಸ್ಥೆ ಇಂಟರ್ನೆಟ್ ಪ್ರೋಟೋಕಾಲ್ ಡಿಟೈಲ್ಸ್ ರೆಕಾರ್ಡ್ (ಐಪಿಡಿಆರ್) ನೆರವಿನಿಂದ ಎಲ್ಲಿಗೆ ಕರೆ ಹೋಗಿದೆ. ಯಾವ ದೇಶದಲ್ಲಿ ಫೋನ್ ಖರೀದಿ ಮಾಡಲಾಗಿದೆ. ಅದರ ಮೂಲ ಏನೆಂಬುದನ್ನು ಖಚಿತ ಪಡಿಸಿಕೊಂಡಿರುವುದಾಗಿ ಎಸ್ಪಿ ಎಚ್.ಡಿ.ಆನಂದ್ಕುಮಾರ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಟವರ್ಗಳ ನೆಟ್ವರ್ಕ್ಗೆ ಸಿಗದೆ ನೆರವಾಗಿ ಸ್ಯಾಟಲೈಟ್ ಅಲೆಗಳ ಮೂಲಕ ಸಂಭಾಷಣೆ, ಸಂದೇಶ ರವಾನಿಸುವ ಸ್ಯಾಟಲೈಟ್ ಫೋನ್ ಅನ್ನು ಹೆಚ್ಚಾಗಿ ಅಪರಾಧ ಕೃತ್ಯಗಳಿಗೆ ಬಳಸಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ದೇಶದಲ್ಲಿ ಇದರ ಬಳಕೆ ನಿಷೇಧಿಸಿದ್ದು, ಅನುಮತಿ ಇಲ್ಲದೆ ಬಳಸುವಂತಿಲ್ಲ. ಜಿಲ್ಲೆಯಲ್ಲಿ ಇದನ್ನು ಉಪಯೋಗಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಗಡಿಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಈ ಹಿಂದೆ ನಕ್ಸಲ್ ಚಲನವಲನ ಇದ್ದ ಕಾರಣ ಅವರು ಬಳಕೆ ಮಾಡಿರಬಹುದು ಎಂದು ಶಂಕಿಸಿ ಪ್ರತಿ ಬಾರಿಯೂ ಪೊಲೀಸರು ತೀವ್ರ ತನಿಖೆಗೊಳಪಡಿಸುತ್ತಾರೆ.
ಈಚೀನ ಸ್ಯಾಟಲೈಟ್ ಫೋನ್ ಬಳಕೆ ಸಂಬಂಧ ತನಿಖೆ ನಡೆಸಿದಾಗ ವಿದೇಶಿಗರು ಬಳಕೆ ಮಾಡಿರುವು ದಾಗಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳು ನಡೆಯ ದಂತೆ ಕಠಿಣ ಕ್ರಮ ವಹಿಸಲಾಗಿದೆ. | ಎಚ್.ಡಿ.ಆನಂದ್ಕುಮಾರ್ ಎಸ್ಪಿ, ಚಾಮರಾಜನಗರ
ಈ ಹಿಂದೆಯೂ ಬಳಕೆಯಾಗಿತ್ತು
2019ರ ಅಕ್ಟೋಬರ್ನಲ್ಲಿ ಚಾಮರಾಜನಗರ ಜಿಲ್ಲೆಯ ಬೇರಂಬಾಡಿ ಗ್ರಾಮದ ಬಳಿ ಸ್ಯಾಟಲೈಟ್ ಫೋನ್ ಉಪಯೋಗಿಸಲಾಗಿತ್ತು. ಈ ಸಮಯದಲ್ಲಿ ಕೇರಳದಲ್ಲಿ ನಾಲ್ವರು ನಕ್ಸಲರನ್ನು ಎನ್ಕೌಂಟರ್ ಮಾಡಲಾಗಿದ್ದ ಹಿನ್ನೆಲೆ ಜಿಲ್ಲೆಯ ಗಡಿ ಮೂಲಕ ನಕ್ಸಲರು ರಾಜ್ಯ ಪ್ರವೇಶ ಮಾಡಬಹುದೆಂದು ಶಂಕಿಸಿ ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳ ತೀವ್ರ ಕಟ್ಟೆಚ್ಚರ ವಹಿಸಿದ್ದರು.
| ಕಿರಣ್ ಮಾದರಹಳ್ಳಿ