ಕೆಳಗೆ ಕುಳಿತುಕೊಂಡ ತಕ್ಷಣ ಮೈ ಮೇಲೆ ಬಿದ್ದ ಕಲ್ಲು ಬಂಡೆ, ಮೂರು ವರ್ಷ ಮಗು ಸಾವು

001
Published on

ಚಿಕ್ಕಬಳ್ಳಾಪುರ: ಚಿಕ್ಕ ಮಕ್ಕಳ ವಿಚಾರದಲ್ಲಿ ಸದಾ ಮುಂಜಾಗ್ರತೆಯಿಂದ ಇರಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದಲ್ಲಿ ಪ್ರಾಣಹಾನಿಯ ಅವಘಡಗಳು ಸಂಭವಿಸುತ್ತವೆ. ಇಲ್ಲಿ ಕಲ್ಲು ಚಪ್ಪಡಿಯ ಬಳಿ ಕುಳಿತುಕೊಳ್ಳಲು ಹೋದ ಮೂರು ವರ್ಷದ ಮಗುವೊಂದು ಬಂಡೆ ಬಿದ್ದು ಮೃತಪಟ್ಟಿದೆ.

ಓರಿಸ್ಸಾ ಮೂಲದ ರೇಚನ್ ಮತ್ತು ಸುಕುಮನಿ ಮಜಿ ದಂಪತಿಯ ಪುತ್ರ ಮನಬ್ ಮಜಿ (3) ಮೃತ ದುರ್ದೈವಿ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಪೆರೇಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಪ್ರಕರಣದ ಹಿನ್ನೆಲೆ

ಮಜಿ ಜನಾಂಗದ ರೇಚನ್ ಮತ್ತು ಸುಕುಮನಿ ಮಜಿ ಎಂಬುವರು ಚಿಕ್ಕಬಳ್ಳಾಪುರ ತಾಲೂಕಿನ ಹೊಸಹಳ್ಳಿಯ ಎಂ.ಎನ್.ಬಿ ಬ್ರಿಕ್ಸ್ ಪ್ಯಾಕ್ಟರಿಯಲ್ಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇದಕ್ಕೆ ಸಮೀಪದಲ್ಲಿಯೇ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ದಂಪತಿಗೆ ಜಸ್ನಾ ಮಜಿ ಮತ್ತು ಮನಬ್ ಮಜಿ ಇಬ್ಬರು ಮಕ್ಕಳು. ಇದರ ನಡುವೆ ಬೆಳಿಗ್ಗೆ 7 ರ ವೇಳೆ ಮನಬ್ ಮಜಿ ಶೆಡ್ ನ ಮುಂಭಾಗದ ತಡೆಗೋಡೆಯ ಸಮೀಪದ ಬಂಡೆಯ ಮೇಲೆ ಕುಳಿತುಕೊಂಡಿದ್ದು ಇದಕ್ಕಿದ್ದಂತೆ ತಡೆ ಗೋಡೆಯು ಮಗು ಮೇಲೆ ಬಿದ್ದಿದೆ. ಇದರಿಂದ ಕೇಳಿಸಿದ ಭಾರಿ ಶಬ್ದಕ್ಕೆ ಹೊರಗೆ ಬಂದು ನೋಡಿ, ಗೋಡೆಯನ್ನು ಪಕ್ಕಕ್ಕೆ ಸರಿಸಿದಾಗ ಮಗುವಿನ ತಲೆಗೆ ಗಂಭೀರ ಗಾಯ, ಕಿವಿಯಲ್ಲಿ ರಕ್ತಸೋರುತ್ತಿರುವುದು ಕಂಡು ಬಂದಿದೆ. ಕೂಡಲೇ ಆಂಬುಲೆನ್ಸ್ನಲ್ಲಿ ಮಂಡಿಕಲ್ಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಇದಕ್ಕೆ ಎಂ.ಎನ್.ಬಿ ಬ್ರಿಕ್ಸ್ ಫ್ಯಾಕ್ಟರಿಯ ಮಾಲೀಕ ಬಾಬು (34) ನಿರ್ಲಕ್ಷ್ಯ ಕಾರಣ. ಲೇಬರ್ ಶೆಡ್ ಗೆ ಮುಂದೆ ನಿರ್ಮಿಸಿದ್ದ ತಡೆಗೋಡೆಯು ಶಿಥಿಲಾವಸ್ಥೆಯಲ್ಲಿದ್ದು ಇದನ್ನು ತೆರವುಗೊಳಿಸಿಲ್ಲ. ಇದಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net