

ಸಾಸ್ವೆಹಳ್ಳಿ: ಭಾರತ ದೇಶ ಹಾಗೂ ಕರ್ನಾಟಕ ರಾಜ್ಯ ಕಲೆಯಲ್ಲಿ ಶ್ರೀಮಂತವಾಗಿದೆ. ಯಾವುದೇ ದೇಶದಲ್ಲೂ ನಮ್ಮಲ್ಲಿರುವಷ್ಟು ಕಲೆ, ಭಾಷೆ, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಕಾಣಲು ಸಾಧ್ಯವಿಲ್ಲ ಎಂದು ಹೊನ್ನಾಳಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಹೇಳಿದರು.
ಹೋಬಳಿ ವ್ಯಾಪ್ತಿಯ ಹನಗವಾಡಿ ಗ್ರಾಮದ ವೇಣುಗೋಪಾಲ ಕಲಾ ನಾಟ್ಯ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ’ಕುಡುಕ ಹರಿಸಿದ ತಾಳಿ’ 76ನೇ ವರ್ಷದ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.ನಾಟಕಗಳು ಸಾಮಾಜಿಕ ಚಿಂತನೆಗೆ ಸಹಕಾರಿಯಾಗಿದ್ದು, ನಾಡಿನ ಸಂಪತ್ತನ್ನು ಪ್ರತಿಬಿಂಬಿಸುವ ಕಲೆಗಳಾಗಿ ಹೊರ ಹೊಮ್ಮಬೇಕು. ಕಲೆ ಸಾಹಿತ್ಯ ಕ್ಷೇತ್ರಗಳು ಆಗಾಧವಾಗಿ ಬೆಳೆದಿದ್ದರೂ ಇಂದು ನಾಟಕ ಬರೆಯುವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಮಾತನಾಡಿ, ಇಂದು ಸಿನಿಮಾ, ಟಿವಿ ಸೇರಿದಂತೆ ಮನರಂಜನೆಗಾಗಿ ಹಲವಾರು ಮಾಧ್ಯಮಗಳಾಗಿದ್ದರೂ ಅವು ನಾಟಕಗಳಷ್ಟು ಪರಿಣಾಮಕಾರಿಯಾಗಿಲ್ಲ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಾಟಕ ಸಂಘದ ಅಧ್ಯಕ್ಷ ಮಹೇಶ್ವರಪ್ಪ ಮಾತನಾಡಿದರು. ತಾಲೂಕು ಬಿಜೆಪಿ ಮುಖಂಡ ಎಂ.ಪಿ. ರಾಜಣ್ಣ, ಗ್ರಾಮಸ್ಥರಾದ ಎಂ.ಬಿ. ಸತೀಶ್, ಕೃಷ್ಣಮೂರ್ತಿ, ಸುರೇಶಪ್ಪ, ಟೇಕೇಶ್ ರಾವ್, ಆನಂದಪ್ಪ ಉಪಸ್ಥಿತರಿದ್ದರು.