ಅಬ್ಭಾ..ಅಂತೂ ಬೋನಿಗೆ ಬಿತ್ತು ಮುಷ್ಯ ! ಸಾಸ್ವೆಹಳ್ಳಿ ಭಾಗದಲ್ಲಿ 6 ತಿಂಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವಾನರ, ಚೋಳದಗುಡ್ಡದಿಂದ ಬಂದಿದ್ದ ಪರಿಣಿತರ ತಂಡ

Sasvehalli, Mushya Sere, Forest Department,
Published on

ಸಾಸ್ವೆಹಳ್ಳಿ: ಸಾಸ್ವೆಹಳ್ಳಿ ಹೊರ ಹೊಲಯದಲ್ಲಿ ಡಬ್ಬಲ್ ಗೇಟ್ ಸುತ್ತಮುತ್ತ ದಾರಿ ಹೋಕರ ಮೇಲೆರಗಿ ದಾಳಿ ಮಾಡುತ್ತಿದ್ದ ಮುಷ್ಯ ಅಂತೂ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯ ತಿಂಗಳುಗಟ್ಟಲೆ ಕಾರ್ಯಾಚರಣೆಗೆ ಮುಕ್ತಿ ಸಿಕ್ಕಿದೆ. ಚೋಳದಗುಡ್ಡದಿಂದ ಬಂದ ಪರಿಣಿತರ ತಂಡ ಸೆರೆ ಕಾರ್ಯಾಚರಣೆ ಸಫಲಗೊಳಿಸಿದೆ.

ಕಳೆದ ಆರು ತಿಂಗಳಿಂದ ಸಾಸ್ವೆಹಳ್ಳಿ ಭಾಗದಲ್ಲಿ ಒಂಟಿಯಾಗಿ ಹೊಲಗದ್ದೆಗಳಿಗೆ ತೆರಳುತ್ತಿದ್ದವರು ಮತ್ತು ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹೀಗೆ ಎಲ್ಲರ ಮೇಲೂ ಮುಷ್ಯ ದಾಳಿ ಮಾಡುತ್ತಿತ್ತು. ನೂರಕ್ಕೂ ಹೆಚ್ಚು ಜನ ದರ ದಾಳಿಗೆ ಒಳಗಾಗಿದ್ದಾರೆ. ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಜಯವಾಣಿ ಈ ಹಿಂದೆ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಮುಷ್ಯ ದಾಳಿಯಿಂದ ಕಂಗೆಟ್ಟಿದ್ದ ಜನ ಅರಣ್ಯ ಇಲಾಖೆಗೆ ಮನವಿ ಮೇಲೆ ಮನವಿ ಸಲ್ಲಿಸಿ ಸುಸ್ತು ಹೊಡೆದೆದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಸಹ ಮುಷ್ಯ ಸೆರೆ ಹಿಡಿಯಲು ಬಲೆ ಬೀಸುತ್ತಲೆ ಇದ್ದರು. ಆದರೆ, ಅರಣ್ಯ ಇಲಾಖೆ ಬಲೆ, ಬೋನು ಯಾವುದಕ್ಕೂ ಬೀಳದೆ ಚಳ್ಳೆಹಣ್ಣು ತಿನ್ನಿಸುತ್ತಿತ್ತು.

ರೋಸಿ ಹೋದ ಅರಣ್ಯ ಇಲಾಖೆ ಗ್ರಾಪಂ ಮತ್ತು ಸ್ಥಳೀಯ ರೈತರೊಂದಿಗೆ ಸೇರಿ ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಮಂಗಳವಾರ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಚೋಳಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಚಾರಿ ಅವರ ತಂಡವನ್ನು ಕರೆಸಿ ಮುಷ್ಯ ಸೆರೆಗೆ ಸನ್ನದ್ಧರಾಗಿದ್ದರು.

ಮಂಗಳವಾರ ರಾತ್ರಿ ಗ್ರಾಮದ ಹೊರ ಹೊಲಯದ ಹಿದಾಯಿತ್ ಎಂಬುವರ ಜಮೀನಿನಲ್ಲಿ ಬೋನ್ ಇರಿಸಲಾಗಿತ್ತು. ಬುಧವಾರ ಅಂತೂ ಮುಷ್ಯ ಬೋನ್‌ಗೆ ಬಿದ್ದಿದೆ. ಪರಿಣಾಮ ಮುಷ್ಯನಿಂದ ಕಿರಿಕಿರಿ ಅನುಭವಿಸಿದ್ದ ಅಕ್ಕಪಕ್ಕದ ಗ್ರಾಮಗಳಾದ ಸದಾಶಿವಪುರ, ಬೀರಗೊಂಡನಹಳ್ಳಿ, ಉಜ್ಜನೀಪುರ, ಹಿರೇಬಾಸೂರು, ಐನೂರು ಗ್ರಾಮದ ಜನರಲ್ಲಿ ನೆಮ್ಮದಿ ಮೂಡಿದೆ.

ಮುಷ್ಯ ಸೆರೆಗೆ ಮತ್ತು ದೂರದ ಅರಣ್ಯಕ್ಕೆ ರವಾನಿಸಲು ತಗುಲುವ ವೆಚ್ಚ ಭರಿಸುವ ಸಂಬಂಧ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಮಧ್ಯೆ ತಿಕ್ಕಾಟ ನಡೆದು ಕೊನೆಗೆ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಗ್ರಾಪಂ ವೆಚ್ಚ ಭರಿಸಲು ಸಮ್ಮತಿಸಿತು. ಮುಷ್ಯವಿದ್ದ ಬೋನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಾಹನದಲ್ಲಿ ತೆಗೆದುಕೊಂಡು ಹೋದರು.

ವೆಚ್ಚ ಭರಿಸುವಲ್ಲಿ ಗೊಂದಲ ಗ್ರಾಮೀಣ ಪ್ರದೇಶದಲ್ಲಿ ಹೀಗೆ ವನ್ಯಜೀವಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಾಗ ಸಂಬಂಧಪಟ್ಟ ಇಲಾಖೆ ನೆರವಿನಲ್ಲಿ ಸ್ಥಳೀಯ ಗ್ರಾಪಂ ಪರಿಹಾರ ಕಂಡುಕೊಳ್ಳಬೇಕಿರುತ್ತದೆ. ಆದರೆ, ಇದಕ್ಕೆ ತಗುಲುವ ವೆಚ್ಚವನ್ನು ಯಾವ ಇಲಾಖೆ ಭರಿಸಬೇಕು? ಎಂಬ ಗೊಂದಲದಿಂದಾಗಿ ಪರಿಹಾರ ಕ್ರಮ ವಿಳಂಬಗೊಳ್ಳುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇರೆ ಇಲಾಖೆಯವರ ನೆರವು ಪಡೆದು ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯದಲ್ಲಿ ತಗುಲುವ ವೆಚ್ಚವನ್ನು ಗ್ರಾಮ ಪಂಚಾಯಿತಿಯವರೇ ಭರಿಸಬೇಕಾಗುತ್ತದೆ.

ರಾವಭೋವಿ, ಹೊನ್ನಾಳಿ ತಾಪಂ ಇಒ

ಎರಡು ದಿನದ ಹಿಂದೆ ಕೂಲಿ ಕೆಲಸಕ್ಕೆಂದು ಹೊಲಕ್ಕೆ ಬಂದಾಗ ಏಕಾ ಏಕಿ ನನ್ನ ಮೇಲೆ ಮುಷ್ಯ ದಾಳಿ ಮಾಡಿ ಗಾಯ ಮಾಡಿದ್ದು, ವೈದ್ಯರು 15 ಹೊಲಿಗೆ ಹಾಕಿದ್ದಾರೆ. ಚಿಕಿತ್ಸೆಗೆ ಒಳಗಾಗಿದ್ದೇನೆ.

ರಾಜಪ್ಪ, ಕೂಲಿ ಕಾರ್ಮಿಕ, ಸದಾಶಿವಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net