

ಹರೀಶ್ ಆರ್ ಸಾಗೋನಿ ಸಾಸ್ವೆಹಳ್ಳಿ: ಹೋಬಳಿಯ ವಿವಿಧೆಡೆ ಕಾಣಿಸಿಕೊಳ್ಳುತ್ತಿರುವ ಚಿರತೆ, ಕರಡಿ ಬೋನಿಗೆ ಬೀಳದೆ ಸ್ಥಳ ಬದಲಾಯಿಸುತ್ತ ಜನರ ಮುಂದೆ ಬುದ್ಧಿವಂತಿಕೆ ಪ್ರದರ್ಶನ ಮಾಡಿ, ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದು, ಅರಣ್ಯ ಇಲಾಖೆ ಸೆರೆ ಹಿಡಿಯಲು ಹರಸಾಹಸ ಪಡುತ್ತಿದೆ.
ಕಳೆದ ಒಂದು ತಿಂಗಳಿಂದ ಚಿರತೆ, ಕರಡಿ ಉಪಟಳ ಹೆಚ್ಚಾಗಿದೆ. ಚಿರತೆಯೊಂದು ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸುತ್ತಿದೆ. ಇತ್ತ ಕರಡಿಯೂ ದೇಗುಲಗಳಿಗೆ ನುಗ್ಗಿ ದೀಪ ಹಚ್ಚಲು ಇರಿಸಿದ್ದ ಎಣ್ಣೆ ತಿಂದು ಹಾಕುತ್ತಿದೆ. ಅದೃಷ್ಟವಶಾತ್ ಈವರೆಗೂ ಮನುಷ್ಯರ ಮೇಲೆ ದಾಳಿ ನಡೆಸಿಲ್ಲ ಎಂಬುದೇ ಸಮಾಧಾನದ ವಿಚಾರ.
ಹೋಬಳಿಯಲ್ಲಿ ಸುದ್ದಿಯಾಗಿರುವ ಈ ಚಿರತೆ ಈವರೆಗೂ ನೇರವಾಗಿ ಮನುಷ್ಯರ ಕಣ್ಣಿಗೆ ಕಾಣಿಸಿಕೊಂಡಿರುವುದು ವಿರಳ. ಆದರೆ, ಕೆಲವು ಮನೆ, ತೋಟಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೆಜ್ಜೆ ಗುರುತು ಸಹ ಕಂಡುಬಂದಿವೆ.
ಇದರಿಂದ ಹೊಲಗದ್ದೆ, ತೋಟಗಳಿಗೆ ಒಂಟಿಯಾಗಿ ಹೋಗಲು ಜನರು ಭಯಪಡುತ್ತಿದ್ದಾರೆ. ರಾತ್ರಿ ವೇಳೆ ಎಲ್ಲೆಂದರಲ್ಲಿ ಹೊಲಗದ್ದೆ, ತೋಟ, ರಸ್ತೆಬದಿ ಕೂರುವ ಮದ್ಯವ್ಯಸನಿಗಳಿಗೆ ವನ್ಯಜೀವಿಗಳು ಭಯ ಹುಟ್ಟಿಸಿವೆ ಎಂಬುದು ಸತ್ಯ.
ಹೋಬಳಿಯ ಜನರಿಗೆ ಈ ವನ್ಯಜೀವಿಗಳ ಉಪಟಳ ಹೊಸದೇನಲ್ಲ. ಆನೆ, ಕರಡಿ, ಚಿರತೆ, ಕಾಡುಕೋಣ, ಮೊಸಳೆ ಈ ಹಿಂದೆ ಅನೇಕ ಬಾರಿ ಈ ಭಾಗದಲ್ಲಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಕಾಡಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ ಬೋನ್ ಮೂಲಕ ಸೆರೆಹಿಡಿಯಲಾದ ಚಿರತೆ, ಕರಡಿಗಳನ್ನು ಅರಣ್ಯ ಇಲಾಖೆ ದೂರದ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಡದ ಕಾರಣ ಅದೇ ಕರಡಿ, ಚಿರತೆಗಳು ಮತ್ತೆ ಬಂದಿರುವ ಸಾಧ್ಯತೆ ಇದ್ದು, ಒಮ್ಮೆ ಬೋನಿಗೆ ಬಿದ್ದ ಕರಡಿ, ಚಿರತೆ ಮತ್ತೆ ಬೋನಿಗೆ ಬೀಳದಂತೆ ಎಚ್ಚೆತ್ತುಕೊಂಡಿವೆ ಎನ್ನುತ್ತಾರೆ ಹೋಬಳಿ ಜನರು.
ಪದೇ ಪದೆ ಬೋನು ಶಿಫ್ಟ್: ಹೋಬಳಿಯ ಚಿಕ್ಕಬಾಸೂರು ತಾಂಡ, ರಾಂಪುರ, ಬುಳ್ಳಾಪುರ, ಬೀರಗೊಂಡನಹಳ್ಳಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಕುರಿ, ಮೇಕೆ, ನಾಯಿ ಕೊಂದು ಹಾಕಿತ್ತು. ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಬೋನನ್ನು ಗ್ರಾಮದಿಂದ ಗ್ರಾಮಕ್ಕೆ ಶಿಫ್ಟ್ ಮಾಡುತ್ತಲೇ ಇದೆ. ಆದರೆ, ಚಿರತೆ ಮಾತ್ರ ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ಅವಿತುಕೊಳ್ಳುತ್ತಿದೆ.
ದೀಪದ ಎಣ್ಣೆ ತಿನ್ನುವ ಜಾಂಬವಂತ: ಕಳೆದ ತಿಂಗಳು ಹೋಬಳಿಯ ಬೈರನಹಳ್ಳಿಯ ದೇಗುಲಕ್ಕೆ ರಾತ್ರಿ ವೇಳೆ ಕದಾ ಮುರಿದು ನುಗ್ಗಿ ಎಣ್ಣೆ ತಿನ್ನುತ್ತಿದ್ದ ಕರಡಿಯನ್ನು ಗ್ರಾಮಸ್ಥರು ಬೆದರಿಸಿ ದೂರ ಓಡಿಸಿದ್ದರು. ನಂತರ ಸೆರೆ ಹಿಡಿಯಲು ಅರಣ್ಯ ಇಲಾಖೆ ಈ ಗ್ರಾಮದಲ್ಲಿ ಬೋನು ಇರಿಸಿತ್ತು. ಅಲ್ಲಿ ಬೋನು ಇರಿಸುತ್ತಿದ್ದಂತೆ ಪಕ್ಕದ ಗ್ರಾಮಗಳಾದ ಚನ್ನೇನಹಳ್ಳಿ, ಕ್ಯಾಸಿನಕೆರೆ, ಕುಳಗಟ್ಟೆ, ಹುಣಸಘಟ್ಟದತ್ತ ಹೆಜ್ಜೆ ಹಾಕಿತ್ತು. ಇದು ಗ್ರಾಮದ ಹೊರವಲಯದ ದೇಗುಲಗಳ ಬಾಗಿಲು ಮುರಿದು ಎಣ್ಣೆ ತಿಂದು ಹೋಗುತ್ತಿತ್ತು. ಸೆಪ್ಟೆಂಬರ್ 7ರ ರಾತ್ರಿ ಹೋಬಳಿಯ ಹೊಸಹಳ್ಳಿ 1ನೇ ಕ್ಯಾಂಪ್ ಗ್ರಾಮದ ಶ್ರೀ ಕೋದಂಡ ಸೀತಾರಾಮ ದೇಗುಲದ ಬಾಗಿಲು ಮರಿದು ಎಣ್ಣೆ ತಿಂದಿರುವುದಾಗಿ ಗೊತ್ತಾಗಿದೆ.
ನಾವು, ನಮ್ಮ ಸಿಬ್ಬಂದಿ ರೈತರು ತಿಳಿಸಿದ ತಕ್ಷಣ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದೇವೆ. ಹೊನ್ನಾಳಿ ತಾಲೂಕಿನ ನೆಲಹೊನ್ನೆ, ಬೈರನಹಳ್ಳಿಯ ಎರಡು ಕಡೆ ಕರಡಿ ಹಿಡಿಯಲು ಬೋನು ಮತ್ತು ಬುಳ್ಳಾಪುರದಲ್ಲಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಬೋನು ಇರಿಸಿದ ಸ್ಥಳದಲ್ಲಿ ಜನರು ಓಡಾಡದಿದ್ದರೆ ಕಾರ್ಯಾಚರಣೆ ಸುಗಮವಾಗಿ ನಡೆಯುತ್ತದೆ.
I ಮೈಲಾರಪ್ಪ, ಡಿಆರ್‌ಎಫ್‌ಒ, ಮಾವಿನಕಟ್ಟೆ ಅರಣ್ಯ ವಲಯ ಚನ್ನಗಿರಿ.