

ಸಾಸ್ವೆಹಳ್ಳಿ: ಹೋಬಳಿಯ ಕ್ಯಾಸಿನಕೆರೆ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮ, ಸುತ್ತಮುತ್ತಲಿನ ಗ್ರಾಮಸ್ಥರು ಕುಟುಂಬಸಮೇತವಾಗಿ ಆಗಮಿಸಿ ರಥೋತ್ಸವನ್ನು ಕಣ್ತುಂಬಿಕೊಂಡರು. ರಥದ ಕಳಸಕ್ಕೆ ಬಾಳೆ ಹಣ್ಣು ಎಸೆದು, ಚಕ್ರಕ್ಕೆ ತೆಂಗಿನಕಾಯಿ ಒಡೆದು ಹರಕೆ ಸಮರ್ಪಿಸಿದರು.
ಭೈರನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಭದ್ರಾವತಿ ತಾಲೂಕಿನ ವಡೆಂಪುರ ಶ್ರೀ ನಂದಿ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.
ಏ.12ರ ಶನಿವಾರ ದೇವರ ಕಂಕಣಧಾರಣೆಯೊಂದಿಗೆ ಪ್ರಾರಂಭವಾಗಿ ಭಾನುವಾರ ರಥಕ್ಕೆ ಅರಿಶಿಣ ಎಣ್ಣೆ ನೀಡುವ ಕಾರ್ಯ, ಸೋಮವಾರ ಶ್ರೀ ಸ್ವಾಮಿಯ ಕೆಂಡದಾರ್ಚನೆ ನಂತರ ದೇವಾಲಯದ ಆವರಣದಲ್ಲಿ ಜವಳ ತೆಗೆಸುವ ಕಾರ್ಯಗಳು ನಡೆದವು.
ರಥೋತ್ಸವದ ನಂತರ ಮಧ್ಯಾಹ್ನ ಮಡಕೆ ಚೀಲೂರು ಚನ್ನಬಸಪ್ಪನವರ ಕುಟುಂಬಸ್ಥರ ಮನೆಯಿಂದ ಕೊಲ್ಲಾರಿ ಬಂಡಿಯಲ್ಲಿ ಉಚ್ಚಯ ಉತ್ಸವದೊಂದಿಗೆ ಪಾನಕವನ್ನು ತಂದು ಗಂಗೆ ಪೂಜೆ ಮಾಡಿ ನೆರೆದಿದ್ದ ಭಕ್ತರಿಗೆ ಮಂಡಕ್ಕಿ ಉಂಡೆ, ಮೀಠಾಯಿ, ಪಾನಕ ಹಂಚಲಾಯಿತು. ಉತ್ಸವದಲ್ಲಿ ಮಂಗಳವಾದ್ಯ, ವೀರಗಾಸೆ, ತಮಟೆ ಕಲಾತಂಡಗಳು ಇದ್ದವು. ಸಂಜೆ ಸ್ವಾಮಿಯ ಓಕಳಿ ಕಾರ್ಯಕ್ರಮದೊಂದಿಗೆ ಹಬ್ಬ ಸಂಪನ್ನಗೊಂಡಿತು.