ಸಾಸ್ವೆಹಳ್ಳಿ ಏತ ನೀರಾವರಿ ಪವರ್ ಲೈನ್‌ಗೆ ಅಡ್ಡಿ, ಸಂಧಾನ ಸಭೆ ವಿಫಲ

Sasvehalli, Etha Irrigation, Works, Power Line,
Published on

ಸಾಸ್ವೆಹಳ್ಳಿ: ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಸಂಬಂಧಪಟ್ಟ 66 ಕೆವಿ ಪವರ್ ಲೈನ್ ಕ್ರಿಯಾಯೋಜನೆ ಅವೈಜ್ಞಾನಿಕವಾಗಿದೆ ಎಂದು ಕೆಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಚ್.ಜೆ.ರಶ್ಮಿ ಅವರು ನೀರಾವರಿ ನಿಗಮದ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸಂಧಾನ ಸಭೆ ವಿಫಲಗೊಂಡಿತು.

ಸಭೆಯಲ್ಲಿ ಕೆಲ ಹೊತ್ತು ರೈತರು ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಮಧ್ಯೆ ಬಿರುಸಿನ ಚರ್ಚೆ ನಡೆಯಿತು.

ಈಗಾಗಲೇ ಕಾಮಗಾರಿಗೆ ವಿದ್ಯುತ್ ಲೈನ್ ತರಲು ಕೆಪಿಟಿಸಿಎಲ್ ಸಿದ್ಧಪಡಿಸಿದ ಕ್ರಿಯಾ ಯೋಜನೆಯಂತೆಯೇ ಬಿದುರಗಡ್ಡೆ ವಿದ್ಯುತ್ ಸ್ಟೇಷನ್‌ನಿಂದ ಚನ್ನಗಿರಿ ತಾಲೂಕು ಲಿಂಗದಹಳ್ಳಿ ವಿದ್ಯುತ್ ಸ್ಟೇಷನ್‌ಗೆ 66 ಕೆವಿ ಲೈನ್ ಹೋಗಿದೆ. ಈ ವಿದ್ಯುತ್ ಲೈನ್ ಸಹ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸುಮಾರು 1 ಕಿ.ಮೀ.ದೂರದಲ್ಲಿಯೇ ಹಾದು ಹೋಗಿದೆ. ಇದರಿಂದ ಸಂಪರ್ಕ ಪಡೆಯಲಿ. 12 ಕಿ.ಮೀ.ದೂರದಿಂದ ಹೊಸ ಲೈನ್ ತರುವುದನ್ನು ಕೈ ಬಿಡಲಿ. ಈ ಕ್ರಮದಿಂದ 254 ಸಣ್ಣ ಹಿಡುವಳಿ ರೈತರ ಜಮೀನು ಉಳಿಯುತ್ತವೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವುದನ್ನೂ ತಡೆದಂತಾಗುತ್ತದೆ ಎಂದು ರೈತರು ವಾದಿಸಿದರು.

ಆದರೆ, ಇದಕ್ಕೆ ಒಪ್ಪದ ಕೆಪಿಟಿಸಿಎಲ್ ಅಧಿಕಾರಿಗಳು ಈ ಕ್ರಿಯಾಯೋಜನೆ ವೈಜ್ಞಾನಿಕವಾಗಿಯೇ ಇದೆ. 49 ಗೋಪುರಗಳ ಮೂಲಕ ವಿದ್ಯುತ್ ಲೈನ್ ಬರಲಿದ್ದು, 21 ಗೋಪುರಗಳ ಕಾಮಗಾರಿ ಮುಗಿದಿದೆ. ಇನ್ನು 28 ಗೋಪುರಗಳ ಕಾಮಗಾರಿ ನಡೆಯಬೇಕಿದೆ. ನಿಮ್ಮ ವಿರೋಧದಿಂದ ನಿಂತಿದೆ. ಅಡ್ಡಿಪಡಿಸಬೇಡಿ ಎಂದರು.

ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರುವುಗೊಳಿಸಲು ಮತ್ತು ಪರಿಹಾರ ಹಣ ಕಡಿಮೆ ಎನಿಸಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ. ಆದರೆ, ಕಾಮಗಾರಿಗೆ ತಡೆವೊಡ್ಡಬೇಡಿ ಎಂದು ಮನವಿ ಮಾಡಿದರಾದರೂ ರೈತರು ಇದಕ್ಕೆ ಒಪ್ಪಲಿಲ್ಲ. ಸಂಧಾನ ಸಾಧ್ಯವಾಗದೆ ಹೋದಾಗ ಮತ್ತಷ್ಟು ರೈತರು ತಾವೂ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಾಗಿ ಹೇಳಿ ಸಭೆಯಿಂದ ಹೊರ ನಡೆದರು.

ಸಭೆಯಲ್ಲಿ ಶಿವಮೊಗ್ಗದ ಯುಟಿಪಿಯ ಇಇ ಸುರೇಶ್, ಸಾಸ್ವೆಹಳ್ಳಿ ಕೆಎನ್‌ಎನ್‌ಎಲ್ ಕಚೇರಿ ಎಇಇ ರಾಜಕುಮಾರ್, ನಿವೃತ್ತ ಇಇ ಮಲ್ಲಪ್ಪ, ಎಇ ಕರಿಯಪ್ಪ, ಉಪ ತಹಸೀಲ್ದಾರ್ ಚಂದ್ರಪ್ಪ, ರೈತರಾದ ಬೀರಗೊಂಡನಹಳ್ಳಿ ಪರಮೇಶ್ವರಪ್ಪ, ಜಿ.ಎಂ.ಧನಂಜಯ, ಯಶೋಧಮ್ಮ, ಐನೂರು ನಾಗರಾಜ್, ಚಿಕ್ಕಬಾಸೂರು ಪಾಲಾಕ್ಷಪ್ಪ, ಮಹೇಂದ್ರಪ್ಪ, ಪಟೇಲ್ ಸಾಬ್, ನಾಗೇಶ್ ನಾಡಿಗ್, ಕೋಟೆ ಮಂಜಪ್ಪ, ತೊಗಲೇರ ಮಂಜಪ್ಪ ಇದ್ದರು.

ಮೂವರು ರೈತರಿಂದ ತಡೆಯಾಜ್ಞೆ ಹೊನ್ನಾಳಿ ಸಮೀಪ ಬಿದರಗಡ್ಡೆ ವಿದ್ಯುತ್ ಪವರ್ ಟೇಷನ್‌ನಿಂದ ಹೊಟ್ಯಾಪುರ, ಬೀರಗೊಂಡನಹಳ್ಳಿ, ಐನೂರು, ಉಜ್ಜನೀಪುರ, ಸಾಸ್ವೆಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಮಾರ್ಗ ತರಲು ಕೆಪಿಟಿಸಿಎಲ್ ಕ್ರಿಯಾ ಯೋಜನೆ ತಯಾರಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಮೊದಲಿನಿಂದಲೂ ಜಮೀನು ಕಳೆದುಕೊಳ್ಳುತ್ತಿರುವ ರೈತರು ವಿರೋಧ ವ್ಯಕ್ತಪಡಿಸಿದ್ದರು. ರೈತರ ವಿರೋಧದ ಮಧ್ಯೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಹೈದ್ರಾಬಾದ್ ಮೂಲದ ಜಿವಿಪಿಆರ್ ಕಂಪನಿ ಮಾತ್ರ ತನ್ನ ಕೆಲಸ ಮುಂದುವರಿಸಿತ್ತು. ಇದರಿಂದ ಬೇಸತ್ತ ಬೀರಗೊಂಡನಹಳ್ಳಿಯ ಮೂವರು ರೈತರು ತಮ್ಮ ಜಮೀನಲ್ಲಿ ವಿದ್ಯುತ್ ಪವರ್ ಲೈನ್‌ಗೆ ಸಂಬಂಧಪಟ್ಟಂತೆ ಗೋಪುರ ಕಾಮಗಾರಿ ನಡೆಸದಿರಲು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net