

ಸಾಸ್ವೆಹಳ್ಳಿ: ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕಕ್ಕೆ ಉಂಟಾಗಿದ್ದ ಅಡ್ಡಿ ನಿವಾರಣೆಯಾಗಿದ್ದು, ವಿವಿಧ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಭಾನುವಾರ 48 ನೇ ಗೋಪುರದ ಮೂಲಕ ವಿದ್ಯುತ್ ತಂತಿ ಎಳೆಯಲಾಯಿತು.
ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಜಿಲ್ಲೆಯ 116 ಹಳ್ಳಿಗಳ 121 ಕೆರೆಗಳ ನೀರು ತುಂಬಿಸುವ 431 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಇದು. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ತುಂಗಭದ್ರಾ ನದಿ ದಡದ ಮೇಲೆ ನಿರ್ಮಿಸಿರುವ ಜಾಕ್ವೆಲ್ ಪಕ್ಕದಲ್ಲೇ 66 ಕೆವಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಲಾಗಿದೆ. ಹೊನ್ನಾಳಿ ಸಮೀಪದ ಬಿದರಗಡ್ಡೆ ಪವರ್ ಸ್ಟೇಷನ್‌ನಿಂದ 11 ಕಿ.ಮೀ. ದೂರದಿಂದ 49 ವಿದ್ಯುತ್ ಗೋಪುರಗಳ ಮೂಲಕ 66 ಕೆವಿ ಪವರ್ ಲೈನ್ ತರಲಾಗುತ್ತಿದೆ.
48 ನೇ ಗೋಪುರ ಹಾದು ಹೋಗುತ್ತಿದ್ದ ಜಮೀನಿನ ಬಳಿಯ ವ್ಯಕ್ತಿಯೊಬ್ಬರು ಈ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಸರ್ವೇ ನಂ. 42/11 ಜಮೀನಿನ ವಾರಸುದಾರರಾದ ಮಾವಿನಕೋಟೆ ಗ್ರಾಮದ ಶಾಂತಮ್ಮ, ತಮ್ಮ ಜಮೀನಿನಲ್ಲಿ ವಿದ್ಯುತ್ ಗೋಪುರ ನಿರ್ಮಾಣಕ್ಕೆ ಯಾವುದೇ ವಿರೋಧ ಇಲ್ಲ ಎಂದಿದ್ದರು.
ಜಿಲ್ಲಾಡಳಿತದ ಉಪಸ್ಥಿತಿ: ಯೋಜನೆಯ ಕಾಮಗಾರಿ ಶೇ. 99.09 ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಎಡಿಸಿ ಲೋಕೇಶ್ ಪಿ.ಎನ್., ಚನ್ನಗಿರಿ-ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ವಿ. ಜಂಟಿಯಾಗಿ ಮಾಹಿತಿ ನೀಡಿದರು.
ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ವಿದ್ಯುತ್ ಗೋಪುರ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ದಾವಣಗೆರೆ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ, ರಕ್ಷಣಾ ಇಲಾಖೆ, ನೀರಾವರಿ ನಿಗಮ, ವಿದ್ಯುತ್ ಇಲಾಖೆ ಹಾಗೂ ಗುತ್ತಿಗೆದಾರ ಕಂಪನಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿದ್ಯುತ್ ತಂತಿ ಸಹ ಎಳೆಯಲಾಯಿತು ಎಂದು ತಿಳಿಸಿದರು.
ಈ ಹಿಂದೆ ಬೇರೆಡೆ ಈ ವಿದ್ಯುತ್ ಲೈನ್ ಕಾಮಗಾರಿಗಾಗಿ ಜಮೀನು ಕಳೆದುಕೊಳ್ಳುತ್ತಿರುವ ಸ್ಥಳೀಯ ಕೆಲವು ರೈತರು ವಿರೋಧ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದು, 2024 ಮಾರ್ಚ್ 23 ರಂದು ಹೈಕೋರ್ಟ್ ರೈತರ ಅರ್ಜಿ ವಜಾಗೊಳಿಸಿ ಕಾಮಗಾರಿ ನಡೆಸಲು ಆದೇಶಿಸಿದೆ ಎಂದರು.
ಕೆಎನ್‌ಎನ್‌ಎಲ್ ಶಿವಮೊಗ್ಗ ವಿಭಾಗದ ಸಿಇ ಶಿವಾನಂದ ಬಣಕಾರ್, ಎಇಇ ರಾಜಕುಮಾರ್, ಜೆಇ ಕರಿಯಪ್ಪ, ತಹಸೀಲ್ದಾರ್ ಪಟ್ಟರಾಜುಗೌಡ, ಬೆಸ್ಕಾಂ ಎಇಇ ಜಯಪ್ಪ, ಸಾಸ್ವೆಹಳ್ಳಿ ಜೆಇ ಕಾಂತರಾಜು, ರಕ್ಷಣಾ ಇಲಾಖೆ ಪಿಐ ಸುನಿಲ್ ಕುಮಾರ್, ಎಎಸ್‌ಐ ಹರೀಶ್, ರಾಜಸ್ವನಿರೀಕ್ಷಕರಾದ ದಿನೇಶ್ ಬಾಬು, ಬಿ.ಎಂ. ರಮೇಶ್, ಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಮಂಜುನಾಥ್, ಪ್ರಸನ್ನ ಕುಮಾರ್ ಸ್ಥಳದಲ್ಲಿದ್ದರು.