ಹುರುಳೆಹಳ್ಳಿಯಲ್ಲಿ ಕೊಳಚೆ ನೀರಲ್ಲಿ ನಿಂತು ಮಹಿಳೆಯರ ಪ್ರತಿಭಟನೆ

Sasvehalli, Drainage, Construction, Protest,
Published on

ಸಾಸ್ವೆಹಳ್ಳಿ: ಹೋಬಳಿಯ ಹುರುಳೆಹಳ್ಳಿ ಗ್ರಾಮದ ಆಂಜನೇಯ ಬೀದಿಯಲ್ಲಿ ರಸ್ತೆಯ ಮೇಲೆ ನಿಲ್ಲುವ ನೀರು ಹೊರಗೆ ಹೋಗುವಂತೆ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಒತ್ತಾಯಿಸಿ ಬೀದಿಯ ಮಹಿಳೆಯರು ಬುಧವಾರ ಕೊಳಚೆ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು.

ಕಳೆದ ನಾಲ್ಕು ವರ್ಷಗಳ ಹಿಂದೆ ಈ ಬೀದಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸುವಾಗ ರಸ್ತೆಯ ಇಕ್ಕೆಲ ಚರಂಡಿ ನಿರ್ಮಿಸಿಲ್ಲ. ಸಿಮೆಂಟ್ ರಸ್ತೆ ಮೇಲೆ ಬಿದ್ದ ಮಳೆ ನೀರು ಮುಂದೆ ಹರಿದು ತೋಟವೊಂದರ ಮೂಲಕ ನದಿ ಸೇರುತ್ತಿತ್ತು. ಇದೀಗ ಆ ತೋಟದ ಮಾಲೀಕರು ಬೀದಿಗಿಂತ ಎತ್ತರವಾಗಿ ಮಣ್ಣು ಹಾಕಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ತಿಳಿಸಿದರು.

ಕಳೆದ 15 ದಿನಗಳಿಂದ ರಸ್ತೆ ಮೇಲೆ ನೀರು ನಿಂತು ಮನೆಯ ಗೋಡೆಗಳು ತೇವಗೊಂಡಿದ್ದು, ಮನೆಗಳಿಗೆ ಹಾನಿಯಾಗುವ ಸಂಭವವಿದೆ. ಈ ನೀರು ಮನೆ ಒಳಗೆ ಬರದಂತೆ ಪ್ರತಿ ಮನೆ ಮುಂದೆ ಮಣ್ಣಿನ ಒಡ್ಡು ಹಾಕಲಾಗಿದೆ. ನಿಂತ ನೀರು ದುರ್ವಾಸನೆ ಬಂದು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇಲ್ಲಿ ಮಕ್ಕಳು, ವಯೋವೃದ್ಧರು ಓಡಾಡುವುದು ದುಸ್ತರವಾಗಿದೆ ಎಂದು ದೂರಿದರು. ಆದ್ದರಿಂದ ಈ ಕೂಡಲೇ ಬಾಕ್ಸ್ ಚರಂಡಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಈ ಬೀದಿಯ ಸಮಸ್ಯೆ ಕುರಿತು ಈ ಹಿಂದೆ ಪ್ರಧಾನಿ ಮೋದಿಗೂ ಸ್ಥಳೀಯರಿಂದ ಪತ್ರ ಬರೆಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಪಂನವರು ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಅಡಿ ಕ್ರಿಯಾಯೋಜನೆ ತಯಾರಿಸಿ ಕೆಲಸ ಪ್ರಾರಂಭಿಸಲು ಮುಂದಾದಾಗ ಬೀದಿಯ ಕೆಲವರು ಬಾಕ್ಸ್ ಚರಂಡಿ ನಿರ್ಮಾಣಕ್ಕೆ ವಿರೋಧಿಸಿದರು. ಈ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಗಿದೆ.
l ರಾಜಪ್ಪ, ಸದಸ್ಯ, ಗ್ರಾಪಂ, ಹೊಸಹಳ್ಳಿ.

ಸ್ಥಳೀಯರು ಅವಕಾಶ ಮಾಡಿಕೊಟ್ಟರೆ ತುರ್ತಾಗಿ ಚರಂಡಿ ನಿರ್ಮಾಣ ಮಾಡಬಹುದು. ಸ್ಥಳೀಯರ ವಿರೋಧದ ವಿಷಯ ಕುರಿತು ಸಭೆ ಕರೆದು ಅವರ ಮನವೊಲಿಸಿ ಚರಂಡಿ ನಿರ್ಮಾಣಕ್ಕೆ ಮುಂದಾಗುತ್ತೇವೆ.
l ಅಪ್ಪನ ರಾಜು, ಅಧ್ಯಕ್ಷ, ಗ್ರಾಪಂ, ಹೊಸಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net