ಸಸಿ ಮಡಿ, ನಾಟಿ ಮಾಡಿದ ಪೈರು ನದಿ ಪಾಲು

31 vpt 2.2
ವಿರಾಜಪೇಟೆ ಅರಮೇರಿ ಗ್ರಾಮದ ಗದ್ದೆಯಲ್ಲಿ ನದಿ ನೀರು ಸಂಗ್ರಹಗೊಂಡು ಸಸಿ ಮಡಿಗಳು ನೀರು ಪಾಲಾಗಿರುವುದು.
Published on

ವಿರಾಜಪೇಟೆ: ವಿರಾಜಪೇಟೆ ಅರಮೇರಿ ಗ್ರಾಮ ನಾಲ್ಕನೇ ಮೈಲಿನಲ್ಲಿ ವರುಣನ ಆರ್ಭಟಕ್ಕೆ ತತ್ತರಿಸಿರುವ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ನಾಟಿ ಮಾಡಿದ ಭತ್ತದ ಪೈರುಗಳು, ನಾಟಿಗೆ ಅಣಿಯಾಗಿದ್ದ ಸಸಿ ಮಡಿಗಳು ಸಂಪೂರ್ಣ ಜಲಾವೃತಗೊಂಡು ನದಿ ಪಾಲಾಗಿವೆ.

ವಿರಾಜಪೇಟೆ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮದ ನಾಲ್ಕನೇ ಮೈಲು ಗ್ರಾಮದ ಗದ್ದೆಗಳಲ್ಲಿ ನಾಟಿ ಮಾಡಿದ್ದ ಭತ್ತದ ಪೈರು ಮತ್ತು ನಾಟಿಗೆ ಆಣಿಯಾಗಿದ್ದ ಸಸಿ ಮಡಿಗಳು ವರುಣನ ಅವಕೃಪೆಯಿಂದ ನದಿ ಪಾಲಾಗಿವೆ. ಬೆಳೆ ಹಾನಿಯಿಂದಾಗಿ ಈ ಭಾಗದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಗದ್ದೆಗಳಲ್ಲಿ ಸುಮಾರು 10 ಅಡಿಗಳವರೆಗೆ ಮಳೆ ಮತ್ತು ನದಿಯ ನೀರು ಸಂಗ್ರಹಗೊಂಡು ಬಿತ್ತನೆ ಮಾಡಿದ ಸಸಿ ಮಡಿಗಳು, ನಾಟಿ ಮಾಡಿದ್ದ ಭತ್ತದ ಪೈರುಗಳು ನೀರಿನಲ್ಲಿ ತೇಲುತ್ತಿವೆ.

ನಾಲ್ಕನೇ ಮೈಲು ಗ್ರಾಮದಲ್ಲಿ ಕದನೂರು ಕಿರು ನದಿ ಹರಿಯುತ್ತದೆ. ಮಳೆಯಿಂದ ತೊರೆಗಳು, ತೋಡುಗಳಿಂದ ಹರಿಯುವ ಮಳೆಯ ನೀರು ನದಿಯ ಒಡಲನ್ನು ಸೇರಿ ನದಿಯ ನೀರಿನ ಮಟ್ಟ ಏರಿಕೆ ಕಂಡಿದೆ. ಬಿತ್ತನೆ ಮಾಡಿದ ಭತ್ತದ ಗದ್ದೆಗಳಿಗೆ ನದಿಯ ನೀರು ಹರಿದು ಸಂಪೂರ್ಣ ಜಲಾವೃತಗೊಂಡಿದೆ.

2018 ಮತ್ತು 19ರಲ್ಲಿ ಸುರಿದ ಭಾರಿ ಮಳೆಗೆ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಭತ್ತದ ಪೈರುಗಳು ಹಾನಿಯಾಗಿದ್ದವು. ಇದೀಗ ಎರಡು ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಗದ್ದೆಗಳನ್ನು ಕಾಡಾನೆ ಮತ್ತು ವನ್ಯಮೃಗಗಳ ದಾಳಿಯಿಂದಾಗಿ ಪಾಳು ಬಿಡಲಾಗಿದೆ. ಅದರಲ್ಲಿ ಈ ಭಾಗದಲ್ಲಿ ಸುಮಾರು ನೂರಾರು ಎಕರೆ ಗದ್ದೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದೀಗ ಮತ್ತೊಮ್ಮೆ ನಾಟಿಗೆ ಅಣಿಯಾಗಿದ್ದ ಸಸಿ ಮಡಿಗಳು, ನಾಟಿ ಮಾಡಿದ್ದ ಗದ್ದೆಗಳು ಸಂಪೂರ್ಣ ನದಿಯ ಪಾಲಾಗಿವೆ. ಅಲ್ಲದೆ ಕಾಫಿ, ಅಡಕೆ, ಬಾಳೆ ಗಿಡಗಳು ಮಳೆಗೆ ಹಾನಿಯಾಗಿದೆ ಎಂದು ಕದನೂರು ಗ್ರಾಮ ಪಂಚಾಯಿತಿ ಸದಸ್ಯ ಸೋಮೆಯಂಡ ರೇಶಾ ತಿಮ್ಮಯ್ಯ ಅರಮೇರಿ ತಿಳಿಸಿದ್ದಾರೆ.

ಇದೇ ರೀತಿ ಮಳೆ ಮುಂದುವರಿದರೆ ಭತ್ತ ಬೆಳೆಯುವ ಗದ್ದೆಗಳು ಕಣ್ಮರೆಯಾಗುತ್ತವೆ. ಭತ್ತಕ್ಕೆ ಅಥವಾ ಉತ್ತಮ ಅಕ್ಕಿಗೆ ಪರ ಜಿಲ್ಲೆ, ಇಲ್ಲವೇ ಪರ ರಾಜ್ಯವನ್ನು ಅವಲಂಬಿಸುವ ಹಂತಕ್ಕೆ ಕೊಡಗು ಜಿಲ್ಲೆ ತಲುಪುವ ಪ್ರಮೇಯ ಎದುರಾಗುತ್ತದೆ. ತಕ್ಷಣವೇ ಕೃಷಿ, ಕಂದಾಯ ಇಲಾಖೆ ಅಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಪರಿಹಾರಕ್ಕೆ ಮುಂದಾಗಬೇಕು. ಸಂಕಷ್ಟಕ್ಕೀಡಾದ ರೈತರ ಸಮಸ್ಯೆಗಳಿಗೆ ಶಾಸಕರು ತುರ್ತಾಗಿ ಸ್ಪಂದಿಸಿ ಸರ್ಕಾರದಿಂದ ಲಭಿಸುವ ಪರಿಹಾರ ಕೊಡಿಸಲು ಮುಂದಾಗಬೇಕು ಎಂದು ರೈತರ ಪರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net