ಚೇತನ ಸಂಜೆ ರಾಜ್ಯಕ್ಕೆ ಮಾದರಿ ಯೋಜನೆ, ಸಿಇಒ ಶಿಂಧೆ ಕಾರ್ಯಕ್ಕೆ ಶಶಿಧರ ಕೋಸುಂಬೆ ಶ್ಲಾಘನೆ

SHASHIDHAR KOSUMBE
ಶಶಿಧರ ಕೋಸುಂಬೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ
Published on

ವಿಜಯಪುರ: ಚೇತನ ಸಂಜೆ, ಬಿಸಿಯೂಟ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಹಾಗೂ ಬಾಧಿತ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಕಾರ್ಯವೈಖರಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಮುಕ್ತವಾಗಿ ಶ್ಲಾಘಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಮಕ್ಕಳ ಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮಗಳನ್ನು ಪರಿಶೀಲಿಸಲಾಗಿ ವಿಜಯಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಕೆಲಸಗಳಾಗಿವೆ ಎಂದರು.

ಚೇತನ ಸಂಜೆ ಕಾರ್ಯಕ್ರಮದಡಿ ವಸತಿ ನಿಲಯಗಳ ಮಕ್ಕಳಿಗೆ ಉಚಿತವಾಗಿ ಆನ್‌ಲೈನ್ ಮೂಲಕ ಪಠ್ಯ ಬೋಧಿಸಲಾಗುತ್ತಿದೆ. ಇದರಿಂದ ಫಲಿತಾಂಶ ಸುಧಾರಿಸಲು ಸಹಕಾರಿಯಾಗಿದೆ. ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಬಿಸಿಯೂಟ ಕಾರ್ಯಕ್ರಮದಡಿ ಯಾವುದೇ ಅವಘಡ ಉಂಟಾಗದಂತೆ ಮುಂಜಾಗೃತ ಕ್ರಮವಾಗಿ ಸಮವಸ್ತ್ರ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಸ್ಯೆಗಳಿಗೆ ತ್ವರಿತ ಪರಿಹಾರ

ಜಿಲ್ಲೆಯ ಹಲವು ಅಂಗನವಾಡಿ, ವಸತಿ ನಿಲಯಗಳು, ಶಾಲೆಗಳಿಗೆ ಭೇಟಿ ನೀಡಲಾಗಿದ್ದು ಸಮಸ್ಯೆಗಳು ಕಂಡು ಬಂದಿವೆ. ಕೂಡಲೇ ಅವುಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ ವೇಳೆ ಕಳಪೆ ಮೊಟ್ಟೆ ವಿತರಿಸುವ ಆರೋಪಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸುವೆ. ವಿಶೇಷವಾಗಿ ಮುದ್ದೇಬಿಹಾಳ ವ್ಯಾಪ್ತಿ ಕೊಳೆತ ಮೊಟ್ಟೆ ವಿತರಿಸುತ್ತಿರುವ ಆಪಾದನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು.

ಅದರಂತೆ ಬಾಲ್ಯವಿವಾಹ, ಮಕ್ಕಳ ಕಳ್ಳತನ ಪ್ರಕರಣ, ಮಕ್ಕಳನ್ನು ಬಿಕ್ಷಾಟನೆಗೆ ಬಳಸಿಕೊಳ್ಳುವುದು, ಶಾಲೆ ಬಿಟ್ಟ ಮಕ್ಕಳ ಮಾಹಿತಿ ಕಲೆ ಹಾಕುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಮೊಟ್ಟೆ ಖರೀದಿ ಪ್ರಕ್ರಿಯೆ

ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆ ವಿತರಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿಧರ ಅವರು, ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಅಂಗನವಾಡಿಯಿಂದಲೇ ಮೊಟ್ಟೆ ಖರೀದಿಸುವ ಸಲಹೆಯನ್ನು ಸ್ವೀಕರಿಸಿದ್ದು ಮುಂಬರುವ ದಿನಗಳಲ್ಲಿ ಆ ನಿಟ್ಟಿನಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.
ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು. ಅಂಥ ಆರೋಪಗಳು ಕೇಳಿ ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು.
ನ್ಯಾಯಾಧೀಶ ಸಂತೋಷ ಕುಂದರ ಮಾತನಾಡಿ, ಶಾಲೆಗಳ ಹತ್ತಿರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದು ಆ ನಿಟ್ಟಿನಲ್ಲಿ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದಕ್ಕಾಗಿಯೇ ಇರುವ ಕೊಟ್ಪಾ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಕೆ. ಚವಾಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net