

ವಿರಾಜಪೇಟೆ: ಸರ್ವೋದಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವನ್ನು ಜು.25 ರಂದು ಆಚರಿಸಲಾಗುತ್ತಿದ್ದು, ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಎಂ.ವಾಣಿ ಹೇಳಿದರು.
1974 ರಲ್ಲಿ ಬಿ.ವಿ.ರಮಣ ಅವರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದರು. ಆರಂಭದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಡಿ.ಇಡಿ ಮುಂತಾದ ಶಿಕ್ಷಣಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಯಿತು. ನಂತರದಲ್ಲಿ ಶಿಕ್ಷಕರ ತರಬೇತಿ ಕೇಂದ್ರ ಮಾರ್ಪಾಡು ಮಾಡಲಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುವಂತಾಯಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ತನ್ನದೆಯಾದ ರೀತಿಯಲ್ಲಿ ವಿಧ್ಯಾರ್ಥಿಗಳಿಗೆ ಜ್ಞಾನದ ಹೊತ್ತಿಗೆಯನ್ನು ಶಿಕ್ಷಣ ಸಂಸ್ಥೆ ನೀಡುತ್ತಿದೆ. ಮೊದಲು ಮೈಸೂರು ವಿಶ್ವವಿದ್ಯಾಲಯ, ನಂತರದಲ್ಲಿ ಮಂಗಳೂರು, ಇದೀಗ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಕಾಲೇಜು 50 ವರ್ಷಗಳನ್ನು ಪೂರೈಸಿದ್ದು, ಇದರ ಸವಿನನಪಿಗಾಗಿ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎ.ಎಸ್.ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅರಮೇರಿ-ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅದ್ಯಕ್ಷತೆ ವಹಿಸಲಿದ್ದು, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಸುವರ್ಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕೊಡಗು ವಿವಿ ಕುಲಸಚಿವ ಡಾ.ಸುರೇಶ್, ಪತ್ರಕರ್ತ ಚಿದ್ವಿಲಾಸ್, ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜೆ.ಆನಂದ ಮತ್ತು ಕಾಲೇಜಿನ ಸ್ಥಾಪನಾ ವರ್ಷದ ವಿದ್ಯಾರ್ಥಿನಿ ಕೆ.ಗೌರಮ್ಮ ಮುದ್ದಪ್ಪ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿ ವಸಂತಿ ಶರತ್ ಚಂದ್ರ ಮಾತನಾಡಿ, ಸುವರ್ಣ ಮಹೋತ್ಸವ ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಆಚರಿಸಲಾಗುವುದು. ಕಾಲೇಜಿನಲ್ಲಿ ಶಿಕ್ಷಣ ಪಡೆದ ಸಾವಿರಾರು ಮಕ್ಕಳು ದೇಶ ವಿದೇಶದಲ್ಲಿ ನೆಲೆಕಂಡುಕೊಂಡಿದ್ದಾರೆ. ಕೇರಳ ದ ಮಟ್ಟನೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶೈಲಜಾ ಸಂಸ್ಥೆಯ ವಿದ್ಯಾರ್ಥಿಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿನಲ್ಲಿ ಎಂ.ಇಡಿ ಪದವಿ ವಿಭಾಗ ಆರಂಭಿಸಲು ಚಿಂತನೆ ನಡೆದಿದ್ದು, ವಿವಿ ಅನುಮೋದನೆ ಬಾಕಿಯಿದೆ. ಈ ಸಂಬಂಧ ಕಾಲೇಜಿನಿಂದ ಪತ್ರ ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.
ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಿ.ಪದ್ಮಲತಾ, ಕೆ.ಜೆ.ಮಿನಿ. ಸುಜಾತಾ, ಎಚ್.ಆರ್ ಗಿರೀಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.