

ಸಂಡೂರು: ಯೋಗಾಭ್ಯಾಸ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸರ್ವಾಂಗಾಸನ ಮಿದುಳಿಗೆ ರಕ್ತ ಸಂಚಾರವನ್ನು ವೃದ್ಧಿಸುತ್ತದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಶಾಲಾ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಸಮಗ್ರ ಯೋಗ ಚಿಕಿತ್ಸೆಯಲ್ಲಿ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶಗಳಿಗೆ ಪ್ರಾಧಾನ್ಯತೆ ಹೆಚ್ಚಿಸುತ್ತದೆ. ಈ ವರ್ಷದ ಯೋಗ ದಿನದ ಘೋಷ ವಾಖ್ಯ ‘ಒಂದು ಭೂಮಿ ಒಂದು ಆರೋಗ್ಯ’. ಜೀವಿಗಳು ನಮ್ಮ ಗ್ರಹವನ್ನು ಮನೆ ಎಂದು ಪರಿಗಣಿಸಿವೆ ಎಂದರ್ಥ ಎಂದರು.
ತಾಪಂ ಇಒ ಮಡಗಿನ ಬಸಪ್ಪ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಬಿಇಒ ಡಾ.ಐ.ಆರ್.ಅಕ್ಕಿ, ಉದ್ಯೋಗಖಾತ್ರಿ ಎಡಿ ರೇಣುಕಾಚಾರ್ಯ ಸ್ವಾಮಿ, ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಮೆಹಬೂಬ್ ಬಾಷಾ, ಯೋಗ ಶಿಕ್ಷಕ ಶಂಕರ್ ಇತರರಿದ್ದರು.