

ಮಡಿಕೇರಿ: ಮಡಿಕೇರಿ: ಸರ್ವಜ್ಞರು ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕವಿ ಸರ್ವಜ್ಞ ಅವರು ತ್ರಿಪದಿಗಳ ಮೂಲಕ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವಿಶಿಷ್ಟ ಸಾಹಿತ್ಯ ಪರಂಪರೆಯನ್ನು ಹುಟ್ಟು ಹಾಕಿದ್ದ ಸರ್ವಜ್ಞರ ತ್ರಿಪದಿ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತಿ ಡಾ.ಜೆ.ಸೋಮಣ್ಣ ಮಾತನಾಡಿ, ಸರ್ವಜ್ಞರು ತನಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದರು. ನಾಡಿನುದ್ದಗಲಕ್ಕೂ ಸಂಚರಿಸಿದ ಸರ್ವಜ್ಞರು ಶಾಲೆ ಕಾಲೇಜುಗಳಲ್ಲಿ ಕಲಿಯುವ ವಿಷಯಕ್ಕೆ ಹೆಚ್ಚಿನ ಜ್ಞಾನವನ್ನು ಸಮಾಜದಿಂದ ಕಲಿತರು. ಹೀಗಾಗಿ ಇವರಿಗೆ ಸರ್ವಜ್ಞ ಎಂದು ಹೆಸರು ಬರಲು ಸಾಧ್ಯವಾಯಿತು ಎಂದರು.
ಕುಲಾಲ(ಕುಂಬಾರ) ಸಮಾಜದ ಜಿಲ್ಲಾ ಅಧ್ಯಕ್ಷ ಎಂ.ಡಿ.ನಾಣಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕುಂಬಾರ ಸಮಾಜದಲ್ಲಿ ೪೫೦೦ ಜನಸಂಖ್ಯೆ ಇದ್ದು, ಸಂಘಟಿತರಾಗಬೇಕಿದೆ ಎಂದರು. ಮಕ್ಕಳ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕುಲಾಲ ಸಮಾಜದ ಪ್ರಮುಖರಾದ ಒ.ಆರ್.ಮೈಲಪ್ಪ, ಮಣಜೂರು ಮಂಜುನಾಥ್, ಬಿ.ಸಿ.ಶಂಕರಯ್ಯ ಇತರರು ಇದ್ದರು.