

ಕಾರಟಗಿ: ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಶ್ರಮಿಸಿದ ಮಹನೀಯರ ಪೈಕಿ ಸರ್ವಜ್ಞ ಸಹ ಒಬ್ಬರು ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅಸಮಾನತೆ, ಮೌಢ್ಯ ಸೇರಿ ಅನೇಕ ವಿಚಾರಗಳನ್ನು ಸರ್ವಜ್ಞ ತ್ರಿಪದಿಗಳ ಮೂಲಕ ಹೊಗಲಾಡಿಸುವ ಕಾರ್ಯ ಮಾಡಿದ್ದಾರೆ. ಅವರ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿವೆ. ಸದೃಢ ಸಮಾಜ ನಿರ್ಮಾಣಕ್ಕೆ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಮಹಾತ್ಮರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಪುರಸಭೆ ಸಿಬ್ಬಂದಿ ಪರಮೇಶ್ವರಪ್ಪ, ಆದೆಪ್ಪ, ಸಮೀರ್, ನಾಗರಾಜ, ಚನ್ನಬಸವ ಹಿರೇಮಠ, ರಾಘವೇಂದ್ರ, ಅನಂತ ರಾವ್, ರಾಮಣ್ಣ ಇದ್ದರು.