

ಮಂಡ್ಯ: ಸರ್ವಜ್ಞ ಕವಿಯ ತ್ರಿಪದಿಗಳಲ್ಲಿ ಒಂದೊಂದು ಮೌಲ್ಯ, ಅರ್ಥ ಹಾಗೂ ತತ್ವಗಳು ಅಡಗಿವೆ. ಜನಸಾಮಾನ್ಯರು ತಮ್ಮ ಬದುಕಿನಲ್ಲಿ ತ್ರಿಪದಿಯಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 16ನೇ ಶತಮಾನದಲ್ಲಿ ಸಂತ ಕವಿ ಸರ್ವಜ್ಞರು ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಜಯಂತಿಯಲ್ಲಿ ಮಾತ್ರ ನೆನೆಯದೆ, ಪ್ರತಿನಿತ್ಯ ಅವರ ವಚನಗಳನ್ನು ಸ್ಮರಿಸಿ ಈ ಮೂಲಕ ಸರ್ವಜ್ಞ ಕವಿಗೆ ಗೌರವ ಸಲ್ಲಿಸಬೇಕು ಎಂದರು.
ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವನು ಎಂದರ್ಥ. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞ ಕವಿ ಎಲ್ಲ ಕ್ಷೇತ್ರಗಳನ್ನು ಒಳಗೊಂಡಂತೆ ತ್ರಿಪದಿಗಳನ್ನು ರಚಿಸಿದ್ದಾರೆ. ಸಮಾಜ ಹಾಗೂ ಜನರ ಬದುಕಿನ ಜತೆ ಎಲ್ಲ ರಂಗಗಳನ್ನು ಮುಟ್ಟಿದ್ದಾರೆ. ಪ್ರತಿಯೊಬ್ಬ ಜನಸಾಮಾನ್ಯನಿಗೂ ಕೂಡ ಅರ್ಥವಾಗುವಂತೆ ಬಹಳ ಸರಳವಾಗಿ ನೇರ, ನಿಷ್ಟುರ ಹಾಗೂ ಅರ್ಥಪೂರ್ಣವಾಗಿ ಎಲ್ಲರ ಮನ ಮುಟ್ಟುವಂತೆ ತ್ರಿಪದಿಗಳನ್ನು ರಚಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ವಿಚಲಿತರಾಗುತ್ತಿದ್ದಾರೆ. ಪ್ರತಿ ಮನೆಯಲ್ಲಿಯೂ ಸರ್ವಜ್ಞರ ತ್ರಿಪದಿಗಳನ್ನು ಓದಿ, ಅರ್ಥೈಸಿಕೊಂಡು ತಮ್ಮ ಮಕ್ಕಳಿಗೆ ತಿಳಿಸಿ ಧೈರ್ಯ ತುಂಬಬೇಕು. ಸರ್ವಜ್ಞರ ಕಾಲದಲ್ಲಿದ್ದ ಅನಾರೋಗ್ಯಕರ ಸಮಾಜವನ್ನು ಸುಧಾರಿಸಲು ಬಹುದೊಡ್ಡ ರೀತಿಯಲ್ಲಿ ಪ್ರಯತ್ನಪಟ್ಟಿದ್ದಾರೆ. ಜನರ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಔಷಧವನ್ನು ವಚನಗಳ ರೂಪದಲ್ಲಿ ನೀಡಿದ್ದಾರೆ ಎಂದರು.
ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿದೆನ ಬೇಡ, ಮುಂದೆ ಕಟ್ಟಿವುದು ಬುತ್ತಿ, ಸರ್ವಜ್ಞ ಎಂಬ ಸರ್ವಜ್ಞರ ಪ್ರಮುಖ ತ್ರಿಪದಿಯ ಮೂಲಕ ಶ್ರೀಮಂತರೇ ಶ್ರೀಮಂತರಾಗುವುದು ಸೂಕ್ತವಲ್ಲ. ಬಡವರನ್ನು ಕೂಡ ಶ್ರೀಮಂತಗೊಳಿಸಲು ದಾನ ಧರ್ಮವನ್ನು ಮಾಡಿ. ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ಅನ್ನವಿರುವನಕ ಪ್ರಾಣವು- ಜಗದೊಳಗನ್ನವೇ ದೈವ ಸರ್ವಜ್ಞ ಎಂಬ ತ್ರಿಪದಿಯ ಮೂಲಕ ಸರ್ವಜ್ಞರು ಅನ್ನಕ್ಕೆ ವಿಶೇಷ ಪ್ರಾಮುಖ್ಯ ನೀಡಿದ್ದಾರೆ. ಪ್ರತಿಯೊಬ್ಬರೂ ಅನ್ನವನ್ನು ದೇವರ ಸಮನಾಗಿ ಕಾಣಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕನ್ನಡ ಉಪನ್ಯಾಸಕ ಎಂ.ಮಂಜಶೆಟ್ಟಿ, 12ನೇ ಶತಮಾನ ಕಳೆದ ನಂತರ 16ನೇ ಶತಮಾನದಲ್ಲಿ ಕ್ರಾಂತಿಯ ಬೆಳಕನ್ನು ಸರ್ವಜ್ಞ ಕವಿಯ ಮೂಲಕ ಕಾಣಲಾಯಿತು. ತಾವು ರಚಿಸಿದ ತ್ರಿಪದಿಯ ಮೂಲಕ ಇಡೀ ಲೋಕಕ್ಕೆ ಬೆಳಕನ್ನು ನೀಡಿದವರು. ತಮ್ಮ ವಚನಗಳ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು ಎಂದರು.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಜಾತಿ-ವಿಜಾತಿ ಎನ್ನಬೇಡ ಆ ದೇವನೊಲಿದಾತನೇ ಜಾತಾ ಸರ್ವಜ್ಞ ಎಂಬ ಸರ್ವಜ್ಞರ ವಚನಗಳನ್ನು ನುಡಿಯುವ ಮೂಲಕ ಜಾತೀಯತೆಯನ್ನು ಖಂಡಿಸಿ, ಹಲವಾರು ಅಸಮಾನತೆಯನ್ನು ಮೆಟ್ಟಿ ನಿಂತವರು ಸರ್ವಜ್ಞ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಮೋಹನ್ ಕುಮಾರ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಲ್. ಸಂದೇಶ್, ಕುಂಬಾರ ಜಾಗೃತ ವೇದಿಕೆ ಅಧ್ಯಕ್ಷ ಕೃಷ್ಣ, ವಿವಿಧ ತಾಲೂಕಿನ ಅಧ್ಯಕ್ಷರಾದ ಎಂ.ಕುಮಾರ್, ಮಹೇಶ್ ಇತರರಿದ್ದರು.