ಸಮಾಜಕ್ಕೆ ಸರ್ವಜ್ಞನ ತ್ರಿಪದಿ ದಾರಿದೀಪ...

Sarvajna
Published on

ಹಿರಿಯ ನಾಗರಿಕ ವಾಸು ಪೂಜಾರಿ ಅಭಿಮತ

ಉಡುಪಿಯಲ್ಲಿ ಮಹಾಕವಿಯ ಜಯಂತಿ ಆಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕನ್ನಡ ನಾಡಿನ ಶ್ರೇಷ್ಠ ಕವಿಗಳಲ್ಲಿ ಸರ್ವಜ್ಞ ಅವರೂ ಪ್ರಮುಖರಾಗಿದ್ದು, ತ್ರಿಪದಿಗಳ ಮೂಲಕ ಸರಳ ಭಾಷೆಯಲ್ಲಿ ಬದುಕಿನ ಮೌಲ್ಯ ತಿಳಿಸಿದ್ದಾರೆ. ಅವರ ವಚನ ಎಂದಿಗೂ ಸಹ ಸಮಾಜಕ್ಕೆ ದಾರಿದೀಪವಾಗಿದೆ. ಶ್ರೀಸಾಮಾನ್ಯನಿಗೆ ಅದುವೇ ವೇದವಾಗಿದೆ ಎಂದು ಕಾತ್ಯಾಯಿನಿ ನಗರದ ಹಿರಿಯ ನಾಗರಿಕ ವಾಸು ಪೂಜಾರಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆ ಇತ್ತೀಚೆಗೆ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನಗಳ ವಿಸ್ಮಯ

ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್​ ಕೆ. ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಬರೆಯದ ವಚನಗಳಿಲ್ಲ ಎಂಬ ಮಾತಿದೆ. ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿ ವಚನ ರಚಿಸಿರುವುದು ತಿಳಿದು ಬರುತ್ತದೆ. ನೂರು ಸಾಲುಗಳಲ್ಲಿ ಹೇಳಲಾಗದ್ದನ್ನು ಕೇವಲ ಮೂರು ಸಾಲಿನ ಅಚ್ಚ ಕನ್ನಡದಲ್ಲಿ ಹಾಗೂ ಛಂದಸ್ಸು ಪೂರ್ಣವಾಗಿ ತ್ರಿಪದಿ ಮೂಲಕ ಹೇಳಿದ್ದಾರೆ. ಲೌಕಿಕ ಮತ್ತು ಪಾರಮಾರ್ಥಿಕ ಲೋಕ ದರ್ಶನ ಮಾಡಿಸುವ ಸರ್ವಜ್ಞ ವಚನದ ವಾಙ್ಮಯದ ಪರಿ ವಿಸ್ಮಯವಾದುದು ಎಂದರು.

ರಮಾನಂದ ಸೇರಿಗಾರ್​, ಉಮೇಶ್​ ಮೂಲ್ಯ ಮಾತನಾಡಿದರು. ವೇದಿಕೆಯ ಸದಸ್ಯರಾದ ಸುರೇಶ್​, ಅನುರಾಧಾ ಜಿ.ಎಸ್​., ಐಶ್ವರ್ಯಾ ಆರ್​., ರಾಘವೇಂದ್ರ, ನಳಿನಿ ಕೆ., ಆರಾಧ್ಯಾ ಜೆ.ಕೆ., ಶಿವಾನಿ, ಸಿಂಧು ಡಿ., ರಾಮಕೃಷ್ಣ, ಶ್ರೀದೇವಿ, ದೀಕ್ಷಾ, ವೀಣಾ, ಜಯಶ್ರೀ, ಲಕ್ಷ್ಮೀ, ವಿಜಯಲಕ್ಷ್ಮೀ, ದೀಪಾ, ಲತಾ, ಅಶ್ವಿನಿ ಇತರರು ಉಪಸ್ಥಿತರಿದ್ದರು.

ಜಗ-ಯುಗದ ಕವಿ ಸರ್ವಜ್ಞ

ದೇವ, ಧರ್ಮ, ಅಧ್ಯಾತ್ಮ, ಕಾಲಜ್ಞಾನ, ಜ್ಯೋತಿಷ, ರಾಜನೀತಿ, ದಾನ, ಯೋಗ, ಕಲೆ, ಶಿಕ್ಷಣ, ಸಂಗೀತ, ಒಗಟು, ವ್ಯವಹಾರ, ಒಕ್ಕಲು, ದಾಂಪತ್ಯ, ಸುಖ-ದು:ಖ, ಸ್ವರ್ಗ-ನರಕ ಹೀಗೆ ಎಲ್ಲ ಬಗೆಯ ವಿಷಯಗಳ ಕುರಿತು ವಚನಗಳಲ್ಲೇ ದರ್ಶನ ಮಾಡಿಸಿದ್ದಾರೆ. ಸರ್ವಜ್ಞನು ಜಗದ ಕವಿ, ಯುಗದ ಕವಿ. ಸತ್ಯಪ್ರೇಮಿಯಾಗಿದ್ದಲ್ಲದೆ ವಚನಗಳಿಂದಲೇ ಸಮಾಜದ ವೈದ್ಯರೂ ಆಗಿದ್ದಾರೆ ಎಂದು ಶ್ರೀನಿವಾಸ ರಾವ್​ ಕೆ. ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net