

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಆಶ್ರಯದಲ್ಲಿ, ತಾಲೂಕು, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಸಹಕಾರದೊಂದಿಗೆ ಸರ್ವಜ್ಞ ಜಯಂತಿಯನ್ನು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಗುರುವಾರ ಆಚರಿಸಲಾಯಿತು.
ನಾರಾವಿ ಸ.ಉ.ಪ್ರಾ.ಶಾಲೆಯ ಪದವೀಧರ ಶಿಕ್ಷಕಿ ಶಾರದಾ ತ್ರಿಪದಿ ಬ್ರಹ್ಮ ಸರ್ವಜ್ಞ ಕವಿಯ ಬಗ್ಗೆ ಮಾತನಾಡಿ, ಕರ್ನಾಟಕ ಕಂಡ ಶ್ರೇಷ್ಠ ವಚನಕಾರ ದಾರ್ಶನಿಕ, ಕವಿ, ತ್ರಿಪದಿ ಚಕ್ರವರ್ತಿ ಸರ್ವಜ್ಞ ಕವಿ, ಆ ಕಾಲದಲ್ಲಿದ್ದ ಜಾತಿ, ಮತ, ಧರ್ಮ ಸಂಘಷರ್ವನ್ನು ವಿರೋಧಿಸಿ, ವಿಶ್ವಮಾನವತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೇಷ್ಠ ಸಂತ. ಸರ್ವಜ್ಞನ ತ್ರಿಪದಿಗಳು ಸಮಾಜಕ್ಕೆ ಸಾರ್ವಕಾಲಿಕ ಸಂದೇಶಗಳಾಗಿವೆ ಎಂದರು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಮಾತನಾಡಿ, ಮೂರು ವರ್ಷಗಳ ಹಿಂದೆ ಬೆಳ್ತಂಗಡಿ ಶಾಸಕರು ಬೆಳ್ತಂಗಡಿಯಲ್ಲಿ ಸರ್ವಜ್ಞ ವೃತ್ತ ನಿರ್ಮಿಸುವ ಭರವಸೆ ನೀಡಿದ್ದರು. ಇಂದಿಗೂ ಸರ್ವಜ್ಞ ವೃತ್ತ ಆಗಿಲ್ಲ, ಇದು ನಮ್ಮ ಸಮಾಜಕ್ಕೆ ನೋವು ತಂದಿದೆ. ಇನ್ನಾದರೂ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು, ಮುಂದಿನ ವರ್ಷ ಸರ್ವಜ್ಞ ವೃತ್ತದಲ್ಲೇ ಸರ್ವಜ್ಞ ಜಯಂತಿ ನಡೆಸುವ ಅವಕಾಶವನ್ನು ಶಾಸಕರು ನಿರ್ಮಿಸಿಕೊಡಬೇಕು ಎಂಬುದು ನಮ್ಮ ಸಮಾಜದ ಆಗ್ರಹವಾಗಿದೆ ಎಂದರು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ಎಚ್.ಪದ್ಮಕುಮಾರ್ ಮಾತನಾಡಿದರು. ತಹಸೀಲ್ದಾರ್ ಪೃಥ್ವಿ ಸಾನಿಕಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಉಮೇಶ್ ಕುಲಾಲ್, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ಲೋಕೇಶ್ ಕುಲಾಲ್, ಉಪತಹಸೀಲ್ದಾರ್ ಜಯಮ್ಮ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ. ಉಪಸ್ಥಿತರಿದ್ದರು. ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಸ್ವಾಗತಿಸಿ, ಜಯಶ್ರೀ ಬಿ.ಆರ್.ಸಿ ಬೆಳ್ತಂಗಡಿ ನಿರೂಪಿಸಿ, ಎಫ್.ಡಿ.ಎ ಮೃತ್ಯುಂಜ ಆಚಾರ್ಯ ವಂದಿಸಿದರು.
ಸರ್ವಜ್ಞ ದೈವಸಂಭೂತನಾಗಿ, ಎಲ್ಲವನ್ನೂ ತ್ಯಾಜಿಸಿ ಅಖಂಡ ಭಾರತ ಸುತ್ತಿದ ಬೈರಾಗಿ, ಆ ಕಾಲದಲ್ಲಿದ್ದ ಜಾತಿ ತಾರತಮ್ಯವನ್ನು ವಿರೋಧಿಸಿ ತನ್ನ ತ್ರಿಪದಿ ಮೂಲಕ ಸಮಾಜವನ್ನು ತಿದ್ದಿದ ಮಹಾ ದಾರ್ಶನಿಕನಾಗಿದ್ದಾನೆ. ಸರ್ವಜ್ಞನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಪಾಲಿಸಿ ನಾವು ಸಂಘಟಿತರಾಗುವುದರೊಂದಿಗೆ ನಮ್ಮ ಸಂಘಟನೆಯನ್ನು ಬಲಪಡಿಸುವ ಕಾರ್ಯ ಆಗಬೇಕು. ಎಚ್.ಪದ್ಮಕುಮಾರ್, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ https://www.vijayavani.net/social-work-by-organization https://www.vijayavani.net/narsha-robbery-3