

ಹುಬ್ಬಳ್ಳಿ: ದೇಶದಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿರುವ ಸಾವಿರಾರು ಮಂದಿರಗಳು, ವಿಗ್ರಹಗಳು, ಶಿಖರಗಳಿದ್ದು, ಅವುಗಳನ್ನು ನೋಡಲು ಎಲ್ಲೆಡೆಯಿಂದ ಲಕ್ಷಾಂತರ ಜನರು ಆಗಮಿಸಿ ಸುಂದರ ಕಲಾ ಲೋಕ ಕಂಡು ಬೆರಗಾಗುತ್ತಾರೆ. ಇಂತಹ ವೈಭವದ ಭಾರತದಲ್ಲಿ ಕಲೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂತಿರ್ಗಳ ವೀಕ್ಷಣೆಗೆ ತೆರಳಿದ ನಿರ್ಣಾಯಕರ ನಿಯೋಗಕ್ಕೆ ಭಾನುವಾರ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ಮಹಾಮಂಡಳವು 48 ವರ್ಷಗಳಿಂದ ನಗರದಲ್ಲಿ ಕಲಾತ್ಮಕ ಗಣಪತಿ, ವೇದಿಕೆ ಕಲಾಕಾರರು, ಜಾನಪದ, ಸಾಂಸ್ಕೃತಿಕ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಅರ್ಥಪೂರ್ಣ ಹಾಗೂ ಶ್ಲಾಘನೀಯ ವಾಗಿದೆ ಎಂದರು.
ಮಹಾಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿ, ಯುವ ಜನಾಂಗ ಹಾಗೂ ಮಕ್ಕಳಲ್ಲಿ ಕಲೆ, ಸಂಸ್ಕೃತಿ, ಜಾನಪದ, ಸಾಹಿತ್ಯ, ಓದುವ ಹವ್ಯಾಸ ಮೂಡಿಬರಬೇಕು ಮತ್ತು ಅವರಲ್ಲಿ ಅಡಗಿದ ಕಲೆಯನ್ನು ಇಮ್ಮಡಿಗೊಳಿಸುವ ಉದ್ದೇಶ ಮಹಾ ಮಂಡಳದ್ದಾಗಿದೆ ಎಂದರು.
ನಿಯೋಗದಲ್ಲಿ ಅಶೋಕ ಬೆಳ್ಳಿಗಟ್ಟಿ, ಈರಣ್ಣ ಪಾಳೆದ, ಡಾ. ಚಿದಾನಂದ ತೆಗ್ಗಿಹಳ್ಳಿ, ಜಯಕುಮಾರ ಮುರಗೋಡ, ವಿಶ್ವನಾಥ ಹಿತ್ತಾಳಿ, ಹರೀಶ ಭರಾಡೆ, ಶಾಂತಪ್ಪ ನವಲಗುಂದ, ಮೌನೇಶ ಅರ್ಕಸಾಲಿ, ಮೋಹನ ಬಡಿಗೇರ, ಮೃತ್ಯುಂಜಯ ಕಮಡೋಳ್ಳಿಶೆಟ್ಟರ್ ಅವರು ಇದ್ದು, ಈ ತಂಡವು ನಗರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಗಣೇಶ ವಿಗ್ರಹ, ಮಂಟಪ ವೀಕ್ಷಣೆ ಮಾಡಲಿದೆ.
ಎಸ್.ಎಸ್. ಕಮಡೋಳ್ಳಿಶೆಟ್ಟರ್ ಸ್ವಾಗತಿಸಿದರು. ಚನ್ನಬಸಪ್ಪ ಧಾರವಾಡಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಗಾಣಿಗೇರ ವಂದಿಸಿದರು.