

ಬೆಳ್ತಂಗಡಿ: ತತ್ವ ಮತ್ತು ಆಚಾರ ಧರ್ಮದ ಎರಡು ಮಾರ್ಗಗಳು. ಹಿಂಸೆ ಧರ್ಮಕ್ಕೆ ವಿರುದ್ಧವಾದುದು. ಯಾವ ಧರ್ಮವೂ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ. ಹಿಂಸೆಗೆ ಪ್ರಚೋದನೆ ನೀಡುವುದಾದರೆ ಅದು ಧರ್ಮವೂ ಅಲ್ಲ. ಧರ್ಮ ಅರ್ಥವಾಗದವರಲ್ಲಿ ಮಾತ್ರ ಹಿಂಸೆ ಕಾಣಿಸಿಕೊಳ್ಳುತ್ತದೆ. ಶ್ರೇಷ್ಠ ಕಾರ್ಯಗಳು ನಡೆಯುವ ಸ್ಥಳ ಪುಣ್ಯಕ್ಷೇತ್ರ. ಈ ಹಿನ್ನೆಲೆಯಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಧರ್ಮಸ್ಥಳವೇ ಸೂಕ್ತ ಸ್ಥಳ ಎಂದು ವಿದ್ವಾಂಸ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪ ಪ್ರಯುಕ್ತ ಸೋಮವಾರ ಆಯೋಜಿತವಾದ 91ನೇ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಂತಿ, ತೃಪ್ತಿ, ಸಮಾನತೆಯನ್ನು ಬಯಸುವುದೇ ಧರ್ಮಗಳ ಸಾರ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮಗಳಿಗೂ ಗೌರವ ಕೊಡುವ ಸಂಪ್ರದಾಯವಿದೆ. ಇದು ಶ್ರೇಷ್ಠ ಎಂದರು.
ಅಧ್ಯಕ್ಷತೆ ವಹಿಸಿ, ಆಶೀರ್ವಚನ ನೀಡಿದ ತುಮಕೂರು ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮಿಗಳು, ಶ್ರೀಕ್ಷೇತ್ರ ಧರ್ಮಸ್ಥಳ ಇರುವಾಗ ಧರ್ಮದ ಭಯವೇ ಇಲ್ಲ. ಕ್ಷೇತ್ರದ ಅನ್ನ, ಅಭಯ, ವಿದ್ಯೆ, ಔಷಧ, ಸಾಹಿತ್ಯ, ಸಂಸ್ಕೃತಿ ದಾನಗಳು ಶ್ರೇಷ್ಠವಾಗಿವೆ. ಇಂದು ಸಂಘ-ಸಂಸ್ಥೆಗಳು ಧರ್ಮದ ಕಾರ್ಯದೊಂದಿಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಶ್ರೀಕ್ಷೇತ್ರದ ಇಪ್ಪತ್ತು ಧರ್ವಧಿಕಾರಿಗಳ ಶಕ್ತಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಲ್ಲಿ ಕಾಣಬಹುದು ಎಂದರು.
ಭಾರತ ಧರ್ಮಮಾರ್ಗದಲ್ಲಿ ನಡೆಯುವ ದೇಶ. ಎಲ್ಲ ಧರ್ಮಗಳಿಗೆ ಆಶ್ರಯ ನೀಡುವ ದೇಶ. ಭಾರತ ಬೆಳಕನ್ನು ನೀಡುವ ದೇಶವಾದರೆ, ಶ್ರೀಕ್ಷೇತ್ರ ಧರ್ಮಸ್ಥಳ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕ್ಷೇತ್ರ. ವಿಜ್ಞಾನದ ತಳಹದಿಯ ಮೇಲೆ ರೂಪುಗೊಂಡ ಜ್ಞಾನ ಶಾಶ್ವತ. ಡಾ.ಹೆಗ್ಗಡೆ ನೇತೃತ್ವದಲ್ಲಿ ಸಾಮಾಜಿಕ ಹಾಗೂ ಧಾರ್ವಿುಕ ಸುಧಾರಣೆಗಳಾಗಿವೆ. ಅಸೂಯೆ, ದ್ವೇಷದಿಂದ ಧರ್ಮವನ್ನು ಪ್ರಶ್ನಿಸುವುದರಿಂದ ಯಾವ ಸುಧಾರಣೆಯೂ ಆಗುವುದಿಲ್ಲ, ಅದು ತಾತ್ಕಾಲಿಕ. ಕೊನೆಗೆ ಸತ್ಯ, ಧರ್ಮಕ್ಕೆ ಜಯವಾಗುತ್ತದೆ ಎಂದರು.
ಸುನಿಲ್ ಕುಮಾರ್ ಪಂಡಿತ್ ಸನ್ಮಾನಪತ್ರ ವಾಚಿಸಿದರು. ಡಾ.ವಿ.ಜಿ.ಆರತಿ ಬೆಂಗಳೂರು, ಮಹಮ್ಮದ ಗೌಸ ಹವಾಲ್ದಾರ್ ವಿಜಯಪುರ, ಎಂ.ಆರ್.ವೆಂಕಟೇಶ್ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು. ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ವಂದಿಸಿದರು. ಉಪನ್ಯಾಸಕ ಡಾ.ಶ್ರೀಧರ ಭಟ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೆಂದ್ರ ಕುಮಾರ್, ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೆಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.
ಮಾನವ ಕಲ್ಯಾಣವೇ ಗುರಿ: ಮಾನವ ಕಲ್ಯಾಣವೇ ಧರ್ಮಗಳ ಗುರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಗಳ ಆಚರಣೆ, ಕ್ರಿಯೆ ಹಾಗೂ ಸ್ವರೂಪದಲ್ಲಿ ವ್ಯತ್ಯಾಸ ಇದ್ದರೂ ಅಂತಿಮ ಗುರಿ ಮಾನವ ಜನಾಂಗದ ಕಲ್ಯಾಣವೇ. ದೇಶದಲ್ಲಿ ಕಾಲಕಾಲಕ್ಕೆ ಧಾರ್ವಿುಕ, ಆರ್ಥಿಕ ಹಾಗೂ ಸಾಮಾಜಿಕ ಏರುಪೇರುಗಳಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿಯೂ ಧರ್ಮವು ನಿರಂತರತೆಯನ್ನು ಕಾಯ್ದುಕೊಳ್ಳುವುದು ಸವಾಲು. ಆದರೆ, ಧರ್ಮಸ್ಥಳದಲ್ಲಿ ಬದ್ಧತೆ, ಪ್ರಾಮಾಣಿಕತೆಯಿಂದ ಧರ್ಮದಲ್ಲಿ ನಿರಂತರತೆ ಕಾಯ್ದುಕೊಂಡಿದ್ದೇವೆ ಎಂದರು. ಸಮಸ್ಯೆಗಳು ಬಂದಾಗ ಸಹಿಸಿ, ನಮ್ಮ ಜ್ಞಾನದ ಪರಿಧಿ ವಿಸ್ತರಿಸಿಕೊಂಡು ಪರಿಹರಿಸಬೇಕಾಗುತ್ತದೆ. ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೆ ಜಯವಾಗುತ್ತದೆ ಎಂದು ಹೇಳಿದರು.
ಸರ್ವಧರ್ಮ ಸಮ್ಮೇಳನದ ಮೂಲಕ ಭಕ್ತರಿಗೆ ಉತ್ತಮ ಸಂದೇಶ ನೀಡಲಾಗುತ್ತಿದೆ. ಅಂತರಂಗ ಶುದ್ಧಿ ಹಾಗೂ ಪರಿಪಕ್ವತೆಯಿಂದ ಧರ್ಮದ ಆಚರಣೆಯೊಂದಿಗೆ ಬದುಕಿನಲ್ಲಿ ಎಲ್ಲರೂ ಒಳಿತನ್ನು ಕಾಣಬೇಕು ಎಂಬುದೇ 91ನೇ ಅಧಿವೇಶನದ ಆಶಯ ಮತ್ತು ಸಂದೇಶ.
| ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ವಧಿಕಾರಿ, ಶ್ರೀಕೇತ್ರ ಧರ್ಮಸ್ಥಳ
ದಾನಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಗುರುತಿಸಿ ಧಾರ್ವಿುಕ ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಾನವ ಕಲ್ಯಾಣಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದೆ. ಧರ್ಮಸ್ಥಳದಲ್ಲಿ 1933ರಿಂದ ನಡೆಯುತ್ತಿರುವ ಸರ್ವಧರ್ಮ ಸಮ್ಮೇಳನ ಭಕ್ತರಿಗೆ ಉತ್ತಮ ಸಂದೇಶ ನೀಡುತ್ತಿದೆ.
| ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ದಗಂಗಾ ಮಠ, ತುಮಕೂರು