ಸರೋಜಿನಿ ಶಿಂತ್ರಿ ಅಗ್ರಗಣ್ಯ ಲೇಖಕಿ

web 2
Published on

ಧಾರವಾಡ: ಹೆಣ್ಣುಮಕ್ಕಳು ಹೊಸ್ತಿಲು ದಾಟುವ ಕಟ್ಟಪ್ಪಣೆಯ ಹಿಂದಿನ ಕಾಲದಲ್ಲಿ ಮೆಟ್ಟಿ ನಿಂತ ಏಕೈಕ ಮಹಿಳಾ ಪರ ಚಿಂತನೆಗೈದ ಡಾ. ಸರೋಜಿನಿ ಶಿಂತ್ರಿ ಅವರು ಮಹಿಳಾ ಲೇಖಕಿಯರಲ್ಲಿ ಅಗ್ರಗಣ್ಯರು ಎಂದು ಹುಬ್ಬಳ್ಳಿಯ ಲೇಖಕಿ ಶಾಲಿನಿ ರುದ್ರಮುನಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಸರೋಜಿನಿ ಶಿಂತ್ರಿ ಸ್ಮರಣಾರ್ಥ ಮಂಗಳವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ‘ಮಹಿಳಾ ಲೇಖಕಿಯರು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಮಹಿಳೆ ಎಂದಾಕ್ಷಣ ಕೇವಲ ಮಕ್ಕಳು, ಕುಟುಂಬ, ಮದುವೆ ಎಂಬ ಪರಿಧಿಯನ್ನು ಮೀರಿ ಸಾಧಿಸುವ ಮೇರು ಶಿಖರವನ್ನು ಏರಬೇಕು. ಅಂಥ ಅಪರೂಪದ ಲೇಖಕಿ ಡಾ. ಶಿಂತ್ರಿ ಅವರನ್ನು ಕನ್ನಡ ಸಾಹಿತ್ಯದಲ್ಲಿ ಮರೆಯುವಂತಿಲ್ಲ. ಗತವೈಭವದ ಇತಿಹಾಸದಲ್ಲಿ ಮಹಿಳಾ ಲೇಖಕಿಯರ ದಷ್ಟಿಕೋನವು ವೇದ, ಉಪನಿಷತ್ ಕಾಲದಲ್ಲಿನ ಲೋಪುಮುದ್ರೆ, ಇಂದ್ರಾಣಿ, ಅತ್ತಿಮಬ್ಬೆ, ಬಾದಾಮಿ ಚಾಲುಕ್ಯರ ಕಾಲಘಟ್ಟದಲ್ಲಿಯೂ ಸಂಸ್ಕೃತ ಮಹಿಳಾ ಲೇಖಕಿಯರನ್ನು ಸ್ಮರಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದದ ಸಂಘದ ಉಪಾಧ್ಯಕ್ಷ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಡಾ. ಸರೋಜಿನಿ ಶಿಂತ್ರಿ ನನಗೆ ಗುರುವಾಗಿದ್ದರು. ಅವರ ಜ್ಞಾನ, ವ್ಯಕ್ತಿತ್ವ, ಪ್ರವಚನ ನಮ್ಮ ಮೇಲೆ ಗಾಢ ಪರಿಣಾಮ ಬೀರಿತು. ಅವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ದೊರಕಿತ್ತು ಎಂದು ಸ್ಮರಿಸಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಡಾ. ಧನವಂತ ಹಾಜವಗೋಳ, ಡಾ. ಅರುಣಾ ಹಳ್ಳಿಕೇರಿ, ಡಾ. ವಿ. ಶಾರದಾ, ವನದೇವಿ ಹುಚ್ಚಣ್ಣವರ, ಪ್ರಭಾ ನೀರಲಗಿ, ಮಧುಮತಿ ಸಣಕಲ್, ಶಿವಲೀಲಾ ಗುಡಗುಂಟಿ, ಎಸ್.ಕೆ. ಕುಂದರಗಿ, ರಾಜೇಂದ್ರ ಸಾವಳಗಿ, ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net