

ಮೈಸೂರು: ಎಲ್ಲರು ಸರ್ಕಾರಿ ಹುದ್ದೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಬಯಸುತ್ತಾರೆ. ಆದರೆ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮಾತ್ರ ಹಿಂದೇಟು ಹಾಕುತ್ತಾರೆ ಎಂದು ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ. ರಘು ಬೇಸರ ವ್ಯಕ್ತಪಡಿಸಿದರು.
ಮೈಸೂರು ಕನ್ನಡ ವೇದಿಕೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶನಿವಾರ ಸಾಧಕ ಶಿಕ್ಷಕರಿಗೆ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಆಯೋಜಿಸಿದ್ದ ಸರ್ವಪಳ್ಳಿ ಡಾ. ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ನಗರದ ಸರ್ಕಾರಿ ಶಾಲೆಗಳಲ್ಲಿ 10 ಅಥವಾ 15 ಮಕ್ಕಳು ಮಾತ್ರ ಇರುತ್ತಾರೆ. ಆದರೆ, ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸಂಖ್ಯೆ 50ಕ್ಕೂ ಹೆಚ್ಚು ಇದ್ದರೂ ಶಿಕ್ಷಕರ ಪ್ರಮಾಣ ಕಡಿಮೆ ಇರುತ್ತದೆ. ಈ ವ್ಯವಸ್ಥೆ ಬದಲಾಗಬೇಕಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಅಡುಗೆ ತಯಾರಕರು ಬಾರದೆ ಇದ್ದರೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಜತೆಗೆ ಅಡುಗೆ ಕೆಲಸವನ್ನು ಸಹ ನಿರ್ವಹಿಸುವ ಪರಿಸ್ಥಿತಿ ಇದೆ. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಈ ವಿಚಾರ ಗೊತ್ತಿದ್ದರೂ ಸಹ ಏನು ಮಾಡೋದಕ್ಕೆ ಆಗುತ್ತಿಲ್ಲ. ಜನಗಣತಿಯಿಂದ ಹಿಡಿದು ಚುನಾವಣೆವರೆಗೆ ಹಲವು ಕೆಲಸ ಕಾರ್ಯಗಳನ್ನು ಶಿಕ್ಷಕರೇ ನಿಭಾಯಿಸುತ್ತಾರೆ. ಈ ಜವಾಬ್ದಾರಿಗಳಿಂದ ಶಿಕ್ಷಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯಿಸ್ ಮಾತನಾಡಿ, ಇಂದಿನ ಪೀಳಿಗೆ ಯಾರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಅರಿವು ಇಲ್ಲ. ಯುವಜನರು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಸಾಧಕ ಶಿಕ್ಷಕರಾದ ಬಸವರಾಜೇಂದ್ರ ಸ್ವಾಮಿ, ಎನ್.ಆರ್.ಸುಮಾ, ನಾರಾಯಣ್ ರಾವ್, ಡಾ.ಟಿ. ಅನಿತಾ, ಪ್ರತಿಭಾ, ಸಿ.ಎಲ್.ಶರ್ಮಿಳಾ, ಎಂ.ಎ.ಸವಿತಾ, ಗ್ರೀಷ್ಮಾ, ಸುಪ್ರಿಯ ಅವರಿಗೆ ಸರ್ವಪಳ್ಳಿ ಡಾ. ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಹೋರಾಟಗಾರ ಚಕ್ಕಲೂರು ಮಂಜೇಗೌಡ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಪದಾಧಿಕಾರಿಗಳಾದ ಮಾದಪ್ಪ, ಕಾವೇರಮ್ಮ, ಮಾಲಿನಿ, ಭವಾನಿ, ಪ್ರೇಮ, ರಾಮಚಂದ್ರಮ ವಿಶ್ವೇಶ್ವರಯ್ಯ, ಸಾಲುಂಡಿ ದೊರೆಸ್ವಾಮಿ, ಡಾ.ಲೋಕೇಶ್ ಹಾಗೂ ಇತರರು ಇದ್ದರು.