ಮುಷ್ಕರದ ದಿನ ಕೆಲಸ ಮಾಡುವ ನೌಕರರ ಕಟೌಟ್‌ಗೆ ಚಪ್ಪಲಿ ಹಾರ: ಸಾರಿಗೆ ನೌಕರರ ಕೂಟದ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ

KSRTC
KSRTC
Published on

ಬೆಂಗಳೂರು: ‘ಮುಷ್ಕರದ ದಿನ ಬಸ್ ಓಡಿಸುವ ಚಾಲನಾ ಸಿಬ್ಬಂದಿಯ ಫೋಟೋ ಕಟೌಟ್ ಮಾಡಿಸಿ ಚಪ್ಪಲಿ ಹಾರ ಹಾಕುತ್ತೇವೆ’ ಎಂಬ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ನಿಗದಿತ ಗಡುವಿನಲ್ಲಿ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ ಪರಿಷ್ಕರಣೆ ಸೇರಿ ಸಾರಿಗೆ ನೌಕರರ 9 ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಏಪ್ರಿಲ್ 7ರಿಂದ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆ ಕುರಿತು ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಡಿಪೋಗಳಿಗೆ ತೆರಳಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಸಾರಿಗೆ ನೌಕರರಿಗೆ ಮನವಿ ಮಾಡುತ್ತಿದ್ದಾರೆ.

ಇತ್ತೀಚೆಗೆ ಡಿಪೋವೊಂದಕ್ಕೆ ಭೇಟಿ ನೀಡಿದ್ದ ವೇಳೆ ಮುಷ್ಕರದ ದಿನ ಯಾರೊಬ್ಬರು ಬಸ್ ಓಡಿಸಬಾರದು. ಯಾರೋ ಹೇಳಿದರು ಎಂದು ಮುಖಕ್ಕೆ ಮಾಸ್ಕ್, ಹೆಲ್ಮೆಟ್ ಹಾಕಿಕೊಂಡು, ಬಟ್ಟೆ ಸುತ್ತಿಕೊಂಡು ಬಸ್ ಓಡಿಸಬಾರದು. ಒಂದು ವೇಳೆ ಅಂದು ಬಸ್ ಓಡಿಸಿದರೆ, ಡಿಪೋ ಎದುರು ಆ ನೌಕರರ ಫೋಟೋ ಕಟೌಟ್ ನಿಲ್ಲಿಸಿ ಚಪ್ಪಲಿ ಹಾರ ಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಂದ್ರಶೇಖರ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರಿಗೆ ನೌಕರರ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚಂದ್ರಶೇಖರ್ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ನೌಕರರ ಮುಖಂಡರು ಹೀಗೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪು. ಮುಷ್ಕರಕ್ಕೆ ಬೆಂಬಲಿಸುವುದು ಅಥವಾ ಬೆಂಬಲಿಸದಿರುವುದು ನೌಕರರ ವಿವೇಚನೆಗೆ ಬಿಡಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಮಾತಿನ ಭರದಲ್ಲಿ ಹೀಗೆ ಮಾತನಾಡಿರಬಹುದು. ಹೀಗಾಗಿ ಅವರನ್ನು ಕ್ಷಮಿಸಿ ಬಿಡೋಣ ಎಂದು ಹೇಳುತ್ತಿದ್ದಾರೆ. (ವಿಜಯವಾಣಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net