ಬೈಕಿನ ಚಕ್ರಕ್ಕೆ ಸೀರೆಯ ಸೆರಗು ಸಿಲುಕಿ ಸಾವು, ಮಹಿಳೆಯರೇ ಎಚ್ಚರಿಕೆ ವಹಿಸಿ

27cmy3
Published on

ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಸೀರೆಯ ಸೆರಗು ಚಕ್ರಕ್ಕೆ ಸಿಲುಕಿ ಉಂಟಾದ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಚಿಂತಾಮಣಿ ತಾಲೂಕಿನ ಕೇತನಾಯಕನಹಳ್ಳಿಯ ೫೦ ವರ್ಷದ ದ್ಯಾವಮ್ಮ. ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ಕೇತನಾಯಕನಹಳ್ಳಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ.

ದ್ಯಾವಮ್ಮಗೆ ಬೆಳಿಗ್ಗೆ ನಾಯಿಯೊಂದು ಕಚ್ಚಿದ್ದು ಗ್ರಾಮಕ್ಕೆ ಸಮೀಪದಲ್ಲಿರುವ ಬಾಗೇಪಲ್ಲಿ ರಸ್ತೆಯಲ್ಲಿನ ಗಂಜಿಗುಂಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಸೀರೆಯ ಸೆರಗು ಬೈಕ್ ಚಕ್ರಕ್ಕೆ ಸಿಲುಕಿದಾಗ ವಾಹನ ಹಿಂಭಾಗದಲ್ಲಿ ಕುಳಿತ್ತಿದ್ದ ದ್ಯಾವಮ್ಮ ವಾಹನದಿಂದ ಕೆಳಕ್ಕೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ಸ್ಥಳದಆಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಮತ್ತು ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು.

ದ್ವಿಚಕ್ರ ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಸಣ್ಣ ನಿರ್ಲಕ್ಷ್ಯವು ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತದೆ. ಅದರಲ್ಲೂ ಮಹಿಳೆಯರು ಬೈಕಿನಲ್ಲಿ ಕೂರುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net