ಸಮಗ್ರ ಭಾರತ ಕಟ್ಟಿದ ಉಕ್ಕಿನ ಮನುಷ್ಯ

Sardaar
Published on

ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಮರಣೆ

ಸರ್ದಾರ್​ ಪಟೇಲ್​ ಜನ್ಮದಿನ, ಏಕತಾ ನಡಿಗೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತ ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹ ಮಂತ್ರಿಯಾಗಿದ್ದ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರು ಮಾಡಿರುವ ಅನೇಕ ಕೆಲಸಗಳು ಇಂದಿಗೂ ಜೀವಂತಿಕೆ ಹೊಂದಿವೆ. ಒಂದು ಕಾಲದಲ್ಲಿ ಹರಿದುಹಂಚಿಹೋಗಿದ್ದ ರಾಜ್ಯಗಳನ್ನೆಲ್ಲ ಒಗ್ಗೂಡಿಸಿ ಸಮಗ್ರ ಭಾರತವನ್ನು ಕಟ್ಟಿದ ಉಕ್ಕಿನ ಮನುಷ್ಯನಾದ ಪಟೇಲ್​ ಅವರನ್ನು ಸ್ಮರಿಸಿಕೊಳ್ಳುವ ಪುಣ್ಯತಮ ಸಂದರ್ಭವಿದು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಉಡುಪಿ ಜಿಲ್ಲಾಡಳಿತ, ಮೈ ಭಾರತ್​ ಉಡುಪಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್​ಎಸ್​ಎಸ್​, ಎನ್​ಸಿಸಿ, ರೇಂರ್ಜಸ್​ ಆ್ಯಂಡ್​ ರೋವರ್ಸ್​ ಆಶ್ರಯದಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ 150ನೇ ಜನ್ಮದಿನದ ನಿಮಿತ್ತ ಮಂಗಳವಾರ (ನ.11) ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಾದಯಾತ್ರೆ-ಏಕತಾ ನಡಿಗೆ ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ರೆಡ್​ ಕ್ರಾಸ್​ ರಾಜ್ಯ ಸಭಾಪತಿ ರಾಜೀವ್​ ಶೆಟ್ಟಿ ಬಸ್ರೂರು, ಜಿಪಂ ಉಪಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್​ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಶೆಟ್ಟಿ ಕುತ್ಯಾರು, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು, ಎನ್​ಎಸ್​ಎಸ್​, ಎನ್​ಸಿಸಿ, ರೇಂರ್ಜಸ್​ ಆ್ಯಂಡ್​ ರೋವರ್ಸ್​ ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ರೋಷನ್​ ಶೆಟ್ಟಿ ಸ್ವಾಗತಿಸಿದರು. ಎಡಿಸಿ ಅಬೀದ್​ ಗದ್ಯಾಳ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಶಾಂತ್​ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಏಕತಾ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಕನಸು ನನಸು ಮಾಡಿದ ಪ್ರಧಾನಿ ಮೋದಿ

22
ಸ್ವಾತಂತ್ರ್ಯದ ನಂತರ ದೇಶ ವಿಭಜನೆಯ ಬಳಿಕವೂ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿರಲಿಲ್ಲ. ಈ ದೇಶದ ನೆಲದಲ್ಲಿ ಬದುಕು ಕಟ್ಟಿಕೊಂಡು ಇಲ್ಲಿನ ಜಲ, ಗಾಳಿ, ಅನ್ನ ತಿನ್ನುತ್ತ ಅಲ್ಲಿನ ಭಯೋತ್ಪಾದಕರು ಕಾಶ್ಮೀರಿಗರಿಗೆ ತೊಂದರೆ ಕೊಡುತ್ತಿದ್ದರು. ಗನ್​ ಹಿಡಿದು ಬೆದರಿಸುತ್ತಿದ್ದರು. ಅಲ್ಲದೆ, ಭಾರತೀಯರಿಗೆ ತಾವುಗಳು ತಾಯಿಯ ಎದೆ ಹಾಲು ಕುಡಿದಿದ್ದೇ ಆದರೆ ಕಾಶ್ಮೀರದ ಲಾಲ್​ ಚೌಕ್​ನಲ್ಲಿ ನಿಮ್ಮ ತಿರಂಗಾ ಹಾರಿಸಿ ನೋಡೋಣ ಎಂದು ಸವಾಲು ಹಾಕಿದ್ದರು. ಇದು ಪಟೇಲರು ಕಂಡಿದ್ದ ಸಮಗ್ರ ಭಾರತದ ಕನಸಿಗೆ ಅಡ್ಡಿಯಾಗಿತ್ತು. ಐದಾರು ದಶಕಗಳ ಕಾಲ ಅವರ ಉಪಟಳಕ್ಕೆ ಕಡಿವಾಣ ಹಾಕುವವರು ಯಾರೂ ಇರಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಶ್ಮೀರದಲ್ಲಿದ್ದ ಆರ್ಟಿಕಲ್​ 370 ರದ್ದುಗೊಳಿಸಿ, ಅಲ್ಲಿನ ಲಾಲ್​ಚೌಕ್​ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸುವ ಮೂಲಕ ಸರ್ದಾರ್​ ಪಟೇಲ್​ ಅವರು ಕಂಡಿದ್ದ ಕನಸನ್ನು ಸಾಕಾರಗೊಳಿಸಿದರು. ನಾವೆಲ್ಲ ಜಾತಿ, ಧರ್ಮ, ವರ್ಗ ಎಲ್ಲವನ್ನೂ ಮರೆತು ಭಾರತದ ಏಕತೆ, ಸಮಗ್ರತೆಗಾಗಿ ಒಂದಾಗಿರೋಣ. ಅದರ ಜಾಗೃತಿಗಾಗಿಯೇ ಈ ಏಕತಾ ನಡಿಗೆ ಆಯೋಜಿಸಲಾಗಿದೆ ಎಂದು ಸಂಸದ ಕೋಟ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net