

ಸಂಡೂರು: ಸಾರ್ವಕಾಲಿಕವಾಗಿ ದೇಶ ಹೆಮ್ಮೆ ಪಡುವ ಕಾರ್ಯ ಮಾಡಿದ ದೇಶದ ಪ್ರಪ್ರಥಮ ಉಪ ಪ್ರಧಾನಿ, ಗೃಹ ಮಂತ್ರಿ ಸರ್ದಾರ್ ವಲ್ಲಭ ಭಾಯಿ ಪಟೇಲರು ಸದಾ ಸ್ಮರಣೀಯರು ಎಂದು ಶಾಲೆಯ ಮುಖ್ಯ ಶಿಕ್ಷಕ ಎಮ್.ಎಸ್.ಹೊನ್ನೂರ್‌ಸಾಬ್ ಹೇಳಿದರು.
ತಾಲೂಕಿನ ತೋರಣಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸೋಮವಾರ ಆಯೋಜಿಸಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಹಲವು ರಾಜರ ಆಡಳಿತವಿದ್ದ ಸಂಸ್ಥಾನಗಳನ್ನು ಒಟ್ಟು ಗೂಡಿಸಲು ಮಾಡಿದ ಪ್ರಯತ್ನ, ಏಕತೆ ತರುವ ದೂರದೃಷ್ಟಿ ಪಟೇಲರ ಬಗ್ಗೆ ಎಲ್ಲರೂ ಹೆಮ್ಮೆ ಪಡುವ ವಿಷಯ. ಪ್ರಪಂಚದ ಅತಿ ಎತ್ತರ (182 ಮೀಟರ್) ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪಟೇಲರ ಸಾಧನೆಗಳು, ಮತ್ತು ಐಕ್ಯತಾ ಭಾವ, ದೇಶ ಪ್ರೇಮ ಸಾರುವ ಕುರಿತು ಭಾಷಣ ಮಾಡುವುದನ್ನು, ಪ್ರಬಂಧ ಬರೆಯುವುದನ್ನು ವಿದ್ಯಾರ್ಥಿಗಳು ರೂಢಿ ಮಾಡಿಕೊಳ್ಳಬೇಕು ಎಂದರು.
ಇದೇ ವೇಳೆ ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಶಿಕ್ಷಕರಾದ ಕೆ.ಎರ‌್ರಿಸ್ವಾಮಿ, ವಿಜಯಕುಮಾರ್, ಬೋಧಕೇತರ ಸಿಬ್ಬಂದಿ ಸಹಾಸ್ ನಾಯಕ್ ಇತರರು ಇದ್ದರು.