

ಹುಬ್ಬಳ್ಳಿ: ಶತಮಾನದ ಹೊಸ್ತಿಲಿನಲ್ಲಿರುವ ಕೇಶ್ವಾಪುರದ ಸರಸ್ವತಿ ವಿದ್ಯಾರಣ್ಯ ವಾಚನಾಲಯದ ಕಟ್ಟಡ ಕಾಮಗಾರಿ ಐದು ವರ್ಷಗಳಿಂದ ಕುಂಟುತ್ತ ಸಾಗಿದೆ. ಈ ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಜ್ಞಾನ ದಾನ ಮಾಡಬೇಕಿದ್ದ ಗ್ರಂಥಾಲಯದ ಪುಸ್ತಕಗಳು ಮೂಲೆಗುಂಪಾಗಿವೆ. ಸ್ವಿಮ್ಮಿಂಗ್ ಪೂಲ್ ಕಾಂಪ್ಲೆಕ್ಸ್ನಲ್ಲಿರುವ ಪಾಲಿಕೆ ವಲಯ ಕಚೇರಿ 5ರಲ್ಲಿ ಈ ಪುಸ್ತಕಗಳನ್ನು ಒಂದು ಕಡೆ ಗುಡ್ಡೆ ಹಾಕಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ಘಟಪ್ರಭಾದ ನಾತು ಹರ್ಡೆಕರ್ ಅವರ ಕನಸಿನ ಕೂಸು ಈ ಗ್ರಂಥಾಲಯ. 1922ರಲ್ಲಿ ಮರಾಠಾ ಗಲ್ಲಿಯ ಈಳಗೇರ ಬಿಲ್ಡಿಂಗ್ನಲ್ಲಿ ಗ್ರಂಥಾಲಯ ಆರಂಭವಾಯಿತು. ಈಳಗೇರ ಅವರು ಬಾಡಿಗೆ ಪಡೆಯದೆಯೇ ಮಳಿಗೆ ನೀಡಿದ್ದರು. ಅಂದಿನಿಂದ ವಾಚನಾಲಯದಲ್ಲಿ ವಿದ್ಯಾದಾನ ಕಾರ್ಯ ಆರಂಭವಾಯಿತು. ಈಳಗೇರ ಅವರ ನಿಧನಾ ನಂತರ ಹಲವು ವರ್ಷಗಳ ಬಳಿಕ ಅವರ ಕುಟುಂಬದವರು ಕಟ್ಟಡ ನೆಲಸಮಗೊಳಿಸಿ, ಹೊಸ ಬಿಲ್ಡಿಂಗ್ ನಿರ್ವಿುಸಿದರು. ಅಂದಿನಿಂದ ಲೈಬ್ರರಿಗೆ ಜಾಗ ಇಲ್ಲದಂತಾಯಿತು.
ನಂತರ ಸರಸ್ವತಿ ವಿದ್ಯಾರಣ್ಯ ಉಚಿತ ವಾಚನಾಲಯ ಟ್ರಸ್ಟ್ ರಚಿಸಲಾಯಿತು. 2013ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೇಶ್ವಾಪುರದ ಪಾಟೀಲ ಲೇಔಟ್ನಲ್ಲಿ ಮೂರೂವರೆ ಗುಂಟೆ ಸಿಎ ಲ್ಯಾಂಡ್ ಖರೀದಿಸಲಾಯಿತು. ಕಟ್ಟಡ ಕಾಮಗಾರಿಗಾಗಿ ಶಾಸಕರ ನಿಧಿಯಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ 2 ಲಕ್ಷ ರೂ., ಶಾಸಕ ಜಗದೀಶ ಶೆಟ್ಟರ್ 5 ಲಕ್ಷ ರೂ. ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ಪ್ರಲ್ಹಾದ ಜೋಶಿ 5 ಲಕ್ಷ ರೂ. ಸೇರಿ ಒಟ್ಟು 12 ಲಕ್ಷ ರೂ. ನೀಡಿದರು. 2015ರಲ್ಲಿ ಪಾಲಿಕೆ ನೇತೃತ್ವದಲ್ಲಿ ಕಾಮಗಾರಿ ಆರಂಭವಾಯಿತು.
ಗ್ರೌಂಡ್ ಫ್ಲೋರ್ನಲ್ಲಿ ರ್ಪಾಂಗ್, ಮೊದಲ ಮಹಡಿಯಲ್ಲಿ ಗ್ರಂಥಾಲಯ ನಿರ್ವಿುಸಲು ಯೋಜನೆ ಸಿದ್ಧಗೊಂಡಿತು. ಸದ್ಯ ಗ್ರೌಂಡ್ ಫ್ಲೋರ್ ನಿರ್ವಣವಾಗಿದ್ದು, ಮೊದಲ ಮಹಡಿ ಕಾಮಗಾರಿ ಬಾಕಿ ಇದೆ. ಶಾಸಕರ ನಿಧಿಯಿಂದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ 3 ಲಕ್ಷ ರೂ., ಜಗದೀಶ ಶೆಟ್ಟರ್ 5 ಲಕ್ಷ ರೂ., ಪ್ರದೀಪ ಶೆಟ್ಟರ್ 3 ಲಕ್ಷ ರೂ. ಸೇರಿ 11 ಲಕ್ಷ ರೂ. ಸಂಗ್ರಹವಾಗಿದೆ. ಮಾರ್ಚ್ 2020ರಲ್ಲಿ ಟೆಂಡರ್ ಆಗಿದ್ದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ ಎನ್ನುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಆರ್.ಟಿ. ಕೋಮಲಾಪುರ.
ಈಳಗೇರ ಬಿಲ್ಡಿಂಗ್ನಲ್ಲಿ ಆರಂಭವಾಗಿದ್ದ ಸರಸ್ವತಿ ವಿದ್ಯಾರಣ್ಯ ವಾಚನಾಲಯಕ್ಕೆ ಆರಂಭದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಅಜ್ಜನವರು ಆಗಮಿಸಿದ್ದರು. ‘ವಾಚನಾಲಯಕ್ಕೇ ಮಳಿಗೆ ಕೊಟ್ಟುಬಿಡಿ’ ಎಂದು ಈಳಗೇರ ಅವರಿಗೆ ಸಿದ್ಧಾರೂಢಜ್ಜ ಹೇಳಿದ್ದರು. ಅದರಂತೆ ಈಳಗೇರ ಅವರು ವಾಚನಾಲಯಕ್ಕೆ ಉಚಿತವಾಗಿ ಮಳಿಗೆ ಬರೆದುಕೊಟ್ಟಿದ್ದರು ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಹಿರೇಮಠ.
ಭೇಟಿ ನೀಡಿದ್ದ ದಿಗ್ಗಜರು: ವಾಚನಾಲಯಕ್ಕೆ ಬಿ.ಎಂ.ಶ್ರೀ, ಮಾಸ್ತಿ ವೆಂಕಟೇಶ ಅಯ್ಯಂಗಾರ, ದ.ರಾ. ಬೇಂದ್ರೆ ಅವರಂಥ ಮಹಾನ್ ಸಾಹಿತಿಗಳು ಭೇಟಿ ನೀಡಿದ್ದರು. ಸಂಗೀತ ರತ್ನ ಡಾ. ಗಂಗೂಬಾಯಿ ಹಾನಗಲ್, ಪಂ. ಭೀಮಸೇನ ಜೋಶಿ ಸಂಗೀತ ರಸದೌತಣ ನೀಡಿದ್ದರು. ಹುಬ್ಬಳ್ಳಿ ಜನತೆಗೆ ಜ್ಞಾನ ದಾಸೋಹ ಉಣಬಡಿಸಿದ ಗ್ರಂಥಾಲಯ ಪುನಃ ಶೀಘ್ರ ಆರಂಭವಾಗಲಿ ಎನ್ನುತ್ತಾರೆ ಲೇಖಕ ಶ್ರೀನಿವಾಸ ದೇಸಾಯಿ.
15 ಸಾವಿರ ಪುಸ್ತಕಗಳ ಸಂಗ್ರಹ: ಸರಸ್ವತಿ ವಿದ್ಯಾರಣ್ಯ ವಾಚನಾಲಯದಲ್ಲಿ 15 ಸಾವಿರ ಪುಸ್ತಕಗಳ ಸಂಗ್ರಹವಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಪುಸ್ತಕಗಳು ಇಲ್ಲಿ ಲಭ್ಯ. ಕಥೆ, ಕಾದಂಬರಿ, ನಾಟಕ, ಅಧ್ಯಾತ್ಮ, ಕ್ರೀಡೆ ಮತ್ತಿತರ ಬಗೆಯ ಪುಸ್ತಕಗಳಿವೆ.
ಲೈಬ್ರರಿ ಕಟ್ಟಡ ಕಾಮಗಾರಿಗೆ ಇತ್ತೀಚೆಗೆ 11 ಲಕ್ಷ ರೂ. ಅನುದಾನ ದೊರೆತಿದೆ. ಈಗಾಗಲೇ ಟೆಂಡರ್ ಆಗಿದ್ದು, ಕಾರ್ಯಾದೇಶ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. | ವಿಠ್ಠಲ ತುಬಕೆ, ಸಹಾಯಕ ಆಯುಕ್ತ, ವಲಯ ಕಚೇರಿ- 6