ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ಅಗತ್ಯ

mkg1a
Published on

ಚನ್ನಗಿರಿ: ಗ್ರಾಮೀಣ ಕಲೆಗಳು ನಶಿಸುತ್ತಿರುವ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದ ಮೂಲಕ ಗ್ರಾಮೀಣ ಕಲೆ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೆ.ಎಂ. ಸ್ವಾಮಿ ತಿಳಿಸಿದರು.

ತಾಲೂಕಿನ ಕಾಕನೂರು ಗ್ರಾಮದ ಬಸವ ಸಮುದಾಯ ಭವನದಲ್ಲಿ ವಿವೇಕಾನಂದ ಕಾನ್ವೆಂಟ್ ಮತ್ತು ರಾಜ್ಯಕಲಾ ಸಂಸ್ಕೃತ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಶರಣರ ವಚನ ಗೀತೆ ಹಾಡುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಹಿಂದಿನ ಜಾನಪದ ಸಾಹಿತ್ಯದ ಕಲೆಗಳು ಇಂದು ಅಳಿವಿನ ಹಂಚಿಗೆ ಬಂದಿವೆ. ವೀರಗಾಸೆ, ರಂಗಕಲೆ, ಜಾನಪದ ಕ್ರೀಡೆ, ಗಾದೆಗಳು, ನೀತಿಕಥೆಗಳು ಇನ್ನು ಹಲವು ಪ್ರಕಾರಗಳ ಗ್ರಾಮೀಣ ಸಾಹಿತ್ಯದ ಸೊಗಡನ್ನು ಉಳಿಸಲು ಇಂತಹ ಚಟುವಟಿಕೆ ಆಯೋಜಿಸಿ ಪ್ರತಿಭೆಗೆ ವೇದಿಕೆ ನೀಡಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಷತ್ ಗೌರವ ಅಧ್ಯಕ್ಷ ಹಿರೇಕೋಗಲೂರು ಜಗದೀಶ್ ಗೌಡ ಮಾತನಾಡಿ, ಮಕ್ಕಳ ಪ್ರತಿಭೆ ಕಸಿಯಲು ಸಾಧ್ಯವಿಲ್ಲ. ಅದನ್ನು ಉಳಿಸಿ-ಬೆಳೆಸಿ, ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸುವಂತಹ ಕಾರ್ಯ ಪರಿಷತ್‌ನಿಂದ ಮಾಡಲಾಗುತ್ತಿದೆ ಎಂದರು.

ಶರಣರ ವಚನಗೀತೆ ಹಾಡುವ ಸ್ಪರ್ಧೆಯಲ್ಲಿ ಜಾಹ್ನವಿ ಪ್ರಥಮ ಸ್ಥಾನ ಪಡೆದರೆ, ಎಸ್. ಪ್ರತೀಕ್ಷಾ ದ್ವಿತೀಯ, ತೃತೀಯ ಬಹುಮಾನವನ್ನು ಅರ್. ವರ್ಷಾ ಪಡೆದರು. ರಾಜ್ಯ ಕಲಾ ಸಂಸ್ಕೃತಿ ಪರಷತ್ ಅಧ್ಯಕ್ಷ ಏಕಲವ್ಯ ನಾಗರಾಜ್ ಪ್ರಶಸ್ತಿ ವಿತರಿಸಿದರು. ಲಕ್ಷ್ಮೀ, ಎಚ್.ಕೆ. ಪ್ರಕಾಶ್, ಬಸವರಾಜ್ ನಾಯ್ಕ, ಬಸವರಾಜಪ್ಪ, ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net