ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ

19 SARAG 5
Published on

ಸರಗೂರು : ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಹಾಗೂ ಜಮೀನಿನ ಪೋಡು ಮಾಡಲು ಆಗ್ರಹಿಸಿತಾಲೂಕು ಕಚೇರಿ ಎದುರು ಎಐಕೆಕೆಎಂಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ ಬಸವರಾಜ್, 90 ವರ್ಷಗಳಿಂದ ಬಡ ರೈತರಾಗಿಯೇ ಇರುವ ಅನೇಕರು ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡ, ಕಲ್ಲಿನ ಭೂಮಿ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಬದುಕಿಗೆ ಆಧಾರವಾಗಿದೆ. ಸರ್ಕಾರ ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ನೀಡಲಿದೆ ಎಂದು ಇವರೆಲ್ಲರೂ ದಶಕಗಳಿಂದ ಕಾಯುತ್ತಿದ್ದಾರೆ. ಅರ್ಜಿ ನಮೂನೆ 57 ಸಲ್ಲಿಸಿ ಇವರೆಲ್ಲರೂ ಸರ್ಕಾರದಿಂದ ಸಕಾರಾತ್ಮಕವಾದ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ. ಈ ಅರ್ಜಿಯನ್ನೇ ತಿರಸ್ಕರಿಸುತ್ತಿರುವ ಘಟನೆಗಳು ಅತ್ಯಂತ ನಿರಾಸೆಯನ್ನು ತಂದಿದೆ ಎಂದರು.

ಸಿರಿವಂತ ಉದ್ಯಮಿಗಳಿಗೆ ರೆಸಾರ್ಟ್, ಹೋಮ್ ಸ್ಟೇಗಳಿಗೆ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಳ್ಳಲು ಪರವಾನಗಿ ನೀಡುವ ಸರ್ಕಾರ ಸಣ್ಣಪುಟ್ಟ ಹಿಡುವಳಿದಾರರನ್ನು ನಿರ್ಲಕ್ಷೃ ಮಾಡಿದೆ ಎಂದು ಅವರು ದೂರಿದರು. ಎಐಡಿವೈಓ ಜಿಲ್ಲಾ ಅಧ್ಯಕ್ಷ ಸುನೀಲ್ ಮಾತನಾಡಿ, ಬಡ ಕೃಷಿಕರ ಬಗ್ಗೆ ಸರ್ಕಾರ ಶೋಷಣೆ ನಿಲ್ಲಿಸಬೇಕು. ತುರ್ತು ಗಮನ ಹರಿಸಿ ಹಕ್ಕುಪತ್ರ ನೀಡಬೇಕು ಎಂದರು. ತಹಸೀಲ್ದಾರ್ ಮೋಹನ ಕುಮಾರಿ ಅವರಿಗೆ ಮನವಿ ನೀಡಲಾಯಿತು. 25 ದಿನದೊಳಗೆ ಜಂಟಿ ಸರ್ವೇ ಮುಗಿದ ಹಕ್ಕುಪತ್ರ ನೀಡುವ ಭರವಸೆ ನೀಡಿದರು. ಮುಖಂಡರರಾದ ಬಸವರಾಜು, ನಾಗೇಶ್, ಮಹೇಶ್, ಶೈಲೇಂದ್ರ, ನೂರಳಯ್ಯ, ಮಾದಮ್ಮ, ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net