

ಸರಗೂರು: ಪಟ್ಟಣದಿಂದ ಹಂಚೀಪುರ - ಬಿ.ಮಟಕೆರೆ ಸಂಪರ್ಕಕ್ಕೆ ಮುಖ್ಯ ಕೊಂಡಿ ಆಗಿರುವ ಸೇತುವೆಯ (ಕಬಿನಿ ಬಲದಂಡೆ ನಾಲೆಗೆ ನಿರ್ಮಿಸಿರುವ) ಪಿಲ್ಲರ್‌ಗಳು ಶಿಥಿಲವಾಗಿವೆ. ಇದು ಅಪಾಯಕ್ಕೆ ಆಹ್ವಾನ ನೀಡಲು ಅಣಿಯಾಗಿದೆ. ಸೇತುವೆ ಮೇಲಿನ ರಸ್ತೆಯಲ್ಲಿ ಸಂಚಾರಕ್ಕೆ ಜನರು ಹೆದರುವ ಸ್ಥಿತಿ ಎದುರಾಗಿದೆ. ಆದರೂ ಸಂಬಂಧ ಪಟ್ಟ ಇಲಾಖೆ ಮೌನ ವಹಿಸಿದೆ.
ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಆಸ್ಪತ್ರೆ ಬಳಿ ಇರುವ ಸೇತುವೆ, ಅದರ ಮೇಲಿನ ರಸ್ತೆಯನ್ನು ಸುಮಾರು ವರ್ಷದ ಹಿಂದೆಯೇ ನಿರ್ಮಿಸಲಾಗಿದೆ. ಈ ಸೇತುವೆ ತಾಲೂಕಿನ ಈ ಭಾಗದ ಜನರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಕಬಿನಿ ಬಲದಂಡೆ ನಾಲೆಗೆ ಕಟ್ಟಿರುವ ಈ ಸೇತುವೆ ಹಂಚೀಪುರ, ಹಳಿಯೂರು, ದೇವಲಾಪುರ, ಬಿ. ಮಟಕೆರೆ, ಕೂಡಗಿ, ಕುರ್ಣೇಗಾಲ, ಮೊಳೆಯೂರು, ಬಾಡಗ ಮತ್ತಿತರ ಗ್ರಾಮಗಳ ಸಾರ್ವಜನಿಕರಿಗೆ ತಾಲೂಕು ಕೇಂದ್ರಕ್ಕೆ ಬಂದು ಹೋಗಲು ಒಂದು ವರದಾನವೇ ಆಗಿದೆ.
ಆದರೆ ಕಾಲ ಕಾಲಕ್ಕೆ ದುರಸ್ತಿ ಮತ್ತು ನಿರ್ವಹಣೆ ಮಾಡದ ಕಾರಣದಿಂದ ಇದು ಸಂಪೂರ್ಣ ಶಿಥಿಲಗೊಂಡಿದೆ. ಸಿಮೆಂಟ್ ಕಳಚಿ ಒಳಗಿರುವ ಕಬ್ಬಿಣದ ಸರಳುಗಳು ಎದ್ದು ಕಾಣುತ್ತದೆ. ಇದು ಯಾವಾಗ ಕುಸಿದು ಬೀಳುವುದೋ ಎಂಬ ಆತಂಕ ಎದುರಾಗಿದ್ದು, ಸೇತುವೆ ಮೇಲಿನ ಸಂಚಾರ ಎಂಬುದು ಸಾಹಸವೇ ಆಗಿದೆ.