

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದಸರಾ ಹಬ್ಬ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದ್ದು, ನವರಾತ್ರಿಯನ್ನು ಭಕ್ತಿ ಪೂರ್ವಕ ಆಚರಣೆ ಮಾಡಬೇಕು ಎಂದು ನಗರಸಭೆ ಸದಸ್ಯ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ಅಭಿಪ್ರಾಯಪಟ್ಟರು.
ನಗರದ ಅಡೇಪೇಟೆಯಲ್ಲಿನ ಶ್ರೀ ಕಾಶಿವಿಶ್ವನಾಥ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ನೆಲಮಂಗಲ ವೀರಶೈವ ಮಹಿಳಾ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ 9 ದಿನಗಳ ಗಥಾ ಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಕ್ತಿ, ಜ್ಞಾನ ಆಗರವಾಗಿರುವ ದೇವಿಯನ್ನು 9 ದಿನಗಳ ಕಾಲ ಆರಾಧನೆ ಮಾಡುವುದು, ಅಜ್ಞಾನ, ಅಂಧಕಾರ ಹೋಗಲಾಡಿಸುವಂತೆ ಪ್ರಾರ್ಥಿಸುವುದು ದಸರಾದ ವಿಶೇಷವಾಗಿದೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ದೇವಿಯ ಆರಾಧನೆ ಮಾಡಲಾಗುತ್ತದೆ. ನವರಾತ್ರಿಯ ಪ್ರಯುಕ್ತ ಸಮಾಜದ ಮಹಿಳೆಯರೆಲ್ಲ ಸೇರಿ, ದೇವಾಲಯದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಮಾಡಿ, ಮದ್ಯಾಹ್ನದ ವರೆಗೂ ಗಥಾಸಪ್ತಶತಿ ಪಾರಾಯಣ ಮಾಡುತ್ತಿರುವುದು ಒಳ್ಳೆಯ ಸಂಗತಿ ಎಂದರು.
ವಿಶೇಷ ಪೂಜೆ: ನಗರದ ಪೇಟೆಯಲ್ಲಿನ ರಾಜರಾಜೇಶ್ವರ ಹಾಗೂ ಕನ್ನಿಕಾಪರಮೇಶ್ವರ ದೇಗುಲಗಳಲ್ಲಿ ನವರಾತ್ರಿ ಆಚರಣೆಯ 2ನೇ ದಿನ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾದಿಗಳನ್ನು ನೆರವೇರಿಸಲಾಯಿತು.