

ಹುಬ್ಬಳ್ಳಿ : ಅನಾಥ ಹಾಗೂ ಬಡ ಹೆಣ್ಣು ಮಕ್ಕಳನ್ನು ಸಲುಹಿ, ಉನ್ನತ ಶಿಕ್ಷಣ ನೀಡುವ ಜತೆಗೆ ಅವರಿಗೆ ದಾಂಪತ್ಯ ಜೀವನವನ್ನೂ ನೀಡುತ್ತ ಬಂದಿರುವ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ನ ಬಾಲ ಕಲ್ಯಾಣ ಕೇಂದ್ರದಲ್ಲಿ ಶನಿವಾರ ಮದುವೆ ಸಂಭ್ರಮ ಮನೆ ಮಾಡಿತ್ತು.
ಈ ಬಾಲ ಕಲ್ಯಾಣ ಕೇಂದ್ರಕ್ಕೆ 10 ವರ್ಷದವಳಿದ್ದಾಗಲೇ ಬಂದಿದ್ದ ಅನಾಥ ಹೆಣ್ಣು ಮಗಳು ಅನ್ನಪೂರ್ಣೆಶ್ವರಿ ಇದೀಗ ಬಿಇ ಮುಗಿಸಿದ್ದು, ಸೇವಾ ಭಾರತಿ ಟ್ರಸ್ಟ್ನ ಹಿಂದು ಸೇವಾ ಪ್ರತಿಷ್ಠಾನದಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾಳೆ.
22 ವರ್ಷದ ಅನ್ನಪೂರ್ಣೆಶ್ವರಿ ಶನಿವಾರದಂದು ಗದಗ ಜಿಲ್ಲೆ ಹೊಳೆ ಆಲೂರಿನ 27 ವರ್ಷದ ವಿನೋದಕುಮಾರನೊಂದಿಗೆ ಕೇಶ್ವಾಪುರದಲ್ಲಿರುವ ಸೇವಾ ಸದನದ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ತುಳಿದಳು.
ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಳೆದ 6 ಜನ ಯುವತಿಯರಿಗೆ ಟ್ರಸ್ಟ್ನವರೇ ಮುಂದೆ ನಿಂತು ಮದುವೆ ಮಾಡಿದ್ದು, ಶನಿವಾರ ನಡೆದದ್ದು 7ನೇ ಮದುವೆ. ಅನ್ಮಪೂರ್ಣೆಶ್ವರಿ ಬಿಇ ಶಿಕ್ಷಣ ಪೂರೈಸಿದ್ದು, ವರ ವಿನೋದಕುಮಾರ ಹೈದ್ರಾಬಾದ್ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಮೊದಲು ಮದುವೆ ಮಾಡಿಕೊಂಡು ಹೋಗಿದ್ದ ಇಲ್ಲಿನ ಆರೂ ಜನ ಯುವತಿಯರು ಕುಟುಂಬ ಸಮೇತ ಬಂದು, ನೂತನ ವಧು-ವರರನ್ನು ಹಾರೈಸಿದರು.
ಬಾಲ ಕಲ್ಯಾಣ ಕೇಂದ್ರದಲ್ಲಿರುವ ಇನ್ನಿತರ 35 ಜನ ಬಾಲಕಿಯರು ಹೊಸ ಬಟ್ಟೆ ತೊಟ್ಟು, ತಮ್ಮ ಅಕ್ಕನ ಮದುವೆ ನಡೆಯುತ್ತಿದೆ ಎಂಬಂತೆ ಸಂಭ್ರಮಿಸಿದರು. ಸಮಾಜದ ಎಲ್ಲ ವರ್ಗದ ಜನರು ಬಂದು, ವಧು-ವರರನ್ನು ಹಾರೈಸಿದರು. ತಮ್ಮ ಮನೆಯ ಮದುವೆ ನಡೆಯುತ್ತಿದೆ ಎಂಬಂತೆ ಸೇವಾ ಭಾರತಿ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು, ಸುತ್ತಲಿನ ಬಡಾವಣೆ ಜನರು, ರಾಷ್ಟ್ರೀಯ ಸೇವಾ ಸಂಘದ ಪ್ರಮುಖರು ಮದುವಗೆ ಬಂದು, ವಧು-ವರರಿಗೆ ಆಶೀರ್ವದಿಸಿದರು. ಸಂಘ ಪರಿವಾರ ಮೂಲದ ಚನ್ನವೀರಪ್ಪ ಚನ್ನಪ್ಪನವರ ದಂಪತಿ ಕನ್ಯಾದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ರಘು ಅಕ್ಕಮಂಚಿ, ಸೇವಾ ಭಾರತಿ ಟ್ರಸ್ಟ್ನ ರಜತ ಮಹೋತ್ಸವ ಸಂದರ್ಭದಲ್ಲಿ ಈ ವಿವಾಹ ಆಯೋಜಿಸಿರುವುದರಿಂದ ಸಂಭ್ರಮ ದುಪ್ಪಟ್ಟಾಗಿದೆ ಎಂದರು.
1999ರಲ್ಲಿ ಸಂಘದ ಪ್ರೇರಣೆಯಿಂದ ಸ್ಥಾಪನೆಗೊಂಡ ಸೇವಾ ಭಾರತಿ ಟ್ರಸ್ಟ್, ಇಂದು ಸಮಾಜಕ್ಕೆ ಹಲವಾರು ರೀತಿಯ ಸೇವೆ ಸಲ್ಲಿಸುತ್ತಿದೆ ಎಂದರು.
ಸಂಸ್ಥಾಪಕ ಟ್ರಸ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ ಅವರು, ಮಂಗಲನಿಧಿಯ ಮಹತ್ವ ವಿವರಿಸಿದರು. ಸಮಾಜದ ಪಾರಂಪರೆ ಕಾಪಾಡಿಕೊಂಡು ಹೋಗಬೇಕಾಗಿರುವುದು ಗೃಹಸ್ಥನ ಧರ್ಮ. ಸಂಪತ್ತನ್ನು ಸದ್ವನಿಯೋಗ ಮಾಡುವ ಜತೆಗೆ ದೇಶಕ್ಕೆ ಯೋಗ್ಯ ಸಂತಾನ ನೀಡಲಿ ಎಂದು ಹಾರೈಸಿದರು.
ಭವಾನಿ ನಗರದ ನಂಜನಗೂಡು ರಾಯರಮಠದ ಶ್ರೀ ವೇಣುಗೋಪಾಲ ಆಚಾರ್ಯರು ಹಾಗೂ ಹೊಳೆ ಆಲೂರಿನ ಯಚ್ಚರೇಶ್ವರ ಸ್ವಾಮೀಜಿ ಅವರು ವಧು-ವರರಿಗೆ ಆಶೀರ್ವದಿಸಿದರು.
ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಲ್ಪಾ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಅವರು ನವ ದಂಪತಿಯನ್ನು ಹಾರೈಸಿದರು. ವರನ ತಾಯಿ ಈರಮ್ಮ ಬಿಂಗಿ, ಟ್ರಸ್ಟ್ ಅಧ್ಯಕ್ಷೆ ಕಮಲಾ ಜೋಶಿ, ಭಾರತಿ ನಂದಕುಮಾರ, ವೀಣಾ ಮಳಿಯೆ, ಮಂಜುಳಾ ಕೃಷ್ಣನ್, ನಂದಾ ಸವಡಿ, ನಂದಕುಮಾರ, ವೀರಣ್ಣ ಸವಡಿ, ಡಾ. ಗೊ.ಹ. ನರೇಗಲ್, ಎ.ಸಿ. ಗೋಪಾಲ, ಸಂಕಲ್ಪ ಶೆಟ್ಟರ್ ಗೋವಿಂದ ಜೋಶಿ, ಸುಭಾಷಸಿಂಗ್ ಜಮಾದಾರ, ದತ್ತಮೂರ್ತಿ ಕುಲಕರ್ಣಿ ಹಾಗೂ ಮತ್ತಿತರರು ಹಾಜರಿದ್ದರು.