ಉತ್ತಮ ಆಡಳಿತ ನೀಡುವುದೇ ಸಪ್ತಾಹದ ಗುರಿ

klr
Published on

ಕೋಲಾರ: ತಳಮಟ್ಟದಿಂದ ಆಡಳಿತ ಬಲಪಡಿಸುವ ಮತ್ತು ಸಾಮಾನ್ಯರಿಗೆ ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಸುಶಾಸನ ಸಪ್ತಾಹ ಅಭಿಯಾನ ಗುರಿ ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ "ಸುಶಾಸನ ಸಪ್ತಾಹ ಪ್ರಶಾಸನ ಗ್ರಾಮಗಳ ಕಡೆಗೆ&2024' ಉತ್ತಮ ಆಡಳಿತ ವಾರ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಉತ್ತಮ ಆಡಳಿತ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಧ್ಯೇಯ. ದಕ್ಷ ಆಡಳಿತದಿಂದ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಪ್ರಗತಿ ಸಾಧ್ಯ. ಸಾಮಾಜಿಕ ಹಕ್ಕುಗಳೆಂದರೆ ಕೇವಲ ವಸತಿ, ಆಹಾರ ಮತ್ತು ಶಿಕ್ಷಣ ನೀಡುವುದಷ್ಟೇ ಅಲ್ಲ. ವೈಯಕ್ತಿಕ ಭದ್ರತೆ ನೀಡಿ, ಹಕ್ಕುಗಳನ್ನು ರಕ್ಷಿಸುವುದೂ ಆಗಿದೆ. ತಳಮಟ್ಟದಿಂದ ಮೇಲ್ಮಟ್ಟದವರೆಗೂ ಉತ್ತಮ ಆಡಳಿತ ನೀಡಿದಾಗ ಜನರ ಕಷ್ಟಗಳು ದೂರವಾಗುತ್ತದೆ ಎಂದರು.

ತಂತ್ರಜ್ಞಾನದ ಬಳಕೆಯಿಂದ ಭ್ರಷ್ಟಾಚಾರ ಇಳಿಮುಖವಾಗಲಿದೆ. ಆದ್ದರಿಂದ ಯೋಜನೆಗಳ ಜಾರಿಯಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಆಶಯದಂತೆ ಆನ್​ಲೈನ್​ ಹಾಗೂ ಇ-&ಆಡಳಿತದ ಮೂಲಕವೇ ಬಹುತೇಕ ಸಾರ್ವಜನಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರ ಕುಂದು&ಕೊರತೆಗಳನ್ನು ನಿವಾರಿಸುವುದು. ಸಕಾಲ ಯೋಜನೆ ಮೂಲಕ ದೂರುಗಳನ್ನು ಸ್ವೀಕರಿಸಿ ತ್ವರಿತವಾಗಿ ಪರಿಹರಿಸಲಾಗುತ್ತಿದೆ ಎಂದರು.

ಮಾನವ ಹಕ್ಕುಗಳ ರಕ್ಷಣೆ: ಉತ್ತಮ ಆಡಳಿತದಿಂದ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮ ಆಡಳಿತದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರಿ ಸೇವೆ ದೇಶ ಸೇವೆಯಾಗಿದೆ. ಶಿಕ್ಷಣ, ತಂತ್ರಜ್ಞಾನ, ಕೌಶಲ, ಆರೋಗ್ಯದ ಸವಲತ್ತುಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಸುಶಾಸನ ಸಪ್ತಾಹವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಮೂಲಕ ಹಳ್ಳಿಗಳಿಗೆ ರವಾನಿಸುವುದು ಮತ್ತು ಇಡೀ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ಪರಿಕಲ್ಪನೆ ಸಾಕಾರಗೊಳಿಸುವುದು ಆಡಳಿತ ವರ್ಗದ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳಿಗೆ ತಿಳಿಸಿದರು.

ಆಡಳಿತದಲ್ಲಿ ದಕ್ಷತೆ ಮುಖ್ಯ : ಒಂದು ದೇಶದ ಪ್ರಗತಿ ಸಾಧಿಸಲು ಇಲಾಖೆ ಡಿ.ದರ್ಜೆ ನೌಕರ, ಸಹಾಯಕರಿಂದ ಮುಖ್ಯ ಅಧಿಕಾರಿಯವರೆಗೂ ಜರುಗುವ ದಕ್ಷ ಕಾರ್ಯ ನಡೆಯಬೇಕು. ಪ್ರತಿಯೊಬ್ಬ ಅಧಿಕಾರಿ ನಿಷ್ಠೆ ಹಾಗೂ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಕಚೇರಿಗಳಿಗೆ ಬರುವ ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಕಾನೂನು ರೀತ್ಯಾ ಪರಿಹರಿಸಬೇಕು. ಅಧಿಕಾರಿಗಳು ಕಚೇರಿ ಕರ್ತವ್ಯದ ಬಗ್ಗೆ ಸಮಯ ಪ್ರಜ್ಞೆ ಹೊಂದಿರಬೇಕು. ಸಕಾಲದಿಂದ ಬರುವ ಅರ್ಜಿಗಳಿಗೆ ಅಧಿಕಾರಿಗಳು ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಸೋಮೇಗೌಡ ತಿಳಿಸಿದರು.

ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುಶಾಸನ ಸಪ್ತಾಹ ಪ್ರಶಾಸನ ಗ್ರಾಮಗಳ ಕಡೆಗೆ ಕಾರ್ಯಾಗಾರಕ್ಕೆ ಅಪರ ಜಿಲ್ಲಾಧಿಕಾರಿ ಮಂಗಳಾ ಚಾಲನೆ ನೀಡಿ, ಮಾತನಾಡಿದರು. ಜಿಪಂ ಸದಸ್ಯ ವೆಂಕಟಾಚಲಪತಿ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್​, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಎನ್​ಐಸಿಯ ಅಧಿಕಾರಿ ಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net