

ಬೆಂಗಳೂರು: ಸೋಲಿನ ಭೀತಿಯಲ್ಲಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಹಾಗೂ ಬೆಂಬಲಿಗರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ವಾಮಮಾರ್ಗದಲ್ಲಿ ಗೆಲ್ಲಲು ಹೊರಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ವಾಗ್ದಾಳಿ ನಡೆಸಿದ್ದಾರೆ.
ಹಲ್ಲೆ ಸಂಬಂಧ ಠಾಣೆಗೆ ದೂರು ನೀಡಿರುವ ಸಪ್ತಗಿರಿಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ದಿನೇಶ್ ಗುಂಡೂರಾವ್ ಹಾಗೂ ಅವರ ಬೆಂಬಲಿಗರ ಮೇಲೆ ಕೂಡಲೇ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗಾಂಧಿನಗರದಲ್ಲಿ ಗುಂಡಾಗಿರಿಗೆ ಅಂತ್ಯ ಹಾಡಬೇಕಿದೆ. ಗೂಂಡಾಗಿರಿ ಸಾಕು ಸಪ್ತಗಿರಿ ಬೇಕೆಂದು ಯುವಮೋರ್ಚಾ ವತಿಯಿಂದ ಪ್ರಚಾರ ಮಾಡುತ್ತಿದ್ದೇವೆ. ದಿನೇಶ್ ಗುಂಡೂರಾವ್ ಸೋಲಿನ ಭೀತಿಯಿಂದಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದು ಇದೇ ರೀತಿ ಮುಂದುವರಿದರೆ, ನಾವು ಸುಮ್ಮನಿರುವುದಿಲ್ಲ ಎಂದು ಸಪ್ತಗಿರಿ ಗೌಡ ಎಚ್ಚರಿಕೆ ನೀಡಿದರು.
ಎರಡು ದಿನಗಳ ಹಿಂದೆ ರಾಮಚಂದ್ರಪುರದಲ್ಲಿ ಬಿಜೆಪಿ ಕಾರ್ಯಕರ್ತರಾದ ಅರುಣ್ ಮತ್ತು ಕಾರ್ತಿಕ್ ಮೇಲೆ ದಿನೇಶ್ ಗುಂಡೂರಾವ್ ಅವರ ಬೆಂಬಲಿಗರಾದ ಎಪಿಎಸ್ ರಾಜ್ ಕಾರ್ತಿಕ್ ಹಾಗೂ ರೂಪಾ ಸಾಗರ್ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ, ಅಲ್ಲಿಯೂ ಹಲ್ಲೆಗೊಳಗಾದವರಿಗೆ ಧಮಕಿ ಹಾಕಿದ್ದಾರೆ. ಠಾಣೆಗೆ ದೂರು ನೀಡದಂತೆ ನಮ್ಮ ಕಾರ್ಯಕರ್ತರ ಮೇಲೆ ಒತ್ತಡಹಾಕುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆಲ್ಲ ಎದೆಗುಂದುವುದಿಲ್ಲ. ಇನ್ನು ಮುಂದಾದರೂ ದಿನೇಶ್ ಹಾಗೂ ಅವರ ಬೆಂಬಲಿಗರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ನ್ಯಾಯಬದ್ಧವಾಗಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು. ನಾವು ಶಾಂತಿಗೂ ಸಿದ್ಧ, ಸಮರಕ್ಕೂ ಸಿದ್ಧ ಎಂದು ಸಪ್ತಗಿರಿಗೌಡ ಗುಡುಗಿದರು.