

ಬೂದಿಕೋಟೆ: ಸಪ್ಪಲಮ್ಮ ದೇವಾಲಯದ ಭೂಮಿಯನ್ನು ಗ್ರಾಮಸ್ಥರೊಬ್ಬರು ಅಕ್ರಮವಾಗಿ ಮಂಜೂರು ಮಾಡಿಕೊಂಡು ದೇವಸ್ಥಾನದ ಅವಶೇಷಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಆಲಂಬಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಬಂಗಾರಪೇಟೆ ತಾಲೂಕು ಆಲಂಬಾಡಿ ಗ್ರಾಮದ ಸರ್ವೇ ನಂ.44ರಲ್ಲಿ ಪುರಾತನ ಕಾಲದ ಸಪ್ಪಲಮ್ಮ ದೇವಾಸ್ಥಾನವಿದ್ದು, ಅನಾದಿ ಕಾಲದಿಂದಲೂ ಕಾರಮಾನಹಳ್ಳಿ, ಆಲಂಬಾಡಿ, ಜ್ಯೋತೇನಹಳ್ಳಿ, ಹುನಕಲದೊಡ್ಡಿ ಮತ್ತು ಬನಹಳ್ಳಿ ಗ್ರಾಮಸ್ಥರು ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಈ ಸ್ಥಳದಲ್ಲಿ ಇತಿಹಾಸ ಸಾರುವ ಪುರಾತನ ಕಾಲದ ಹತ್ತಾರು ವೀರಗಲ್ಲುಗಳು ಮತ್ತು ಮಂಟಪಗಳಿವೆ. ದೇವಾಲಯ ಶಿಥಿಲಗೊಂಡಿದ್ದ ಕಾರಣ ಇತ್ತೀಚೆಗೆ ಗ್ರಾಮಸ್ಥರು ಜೀಣೋರ್ದ್ದಾರ ಮಾಡಿದ್ದರು. ಸ್ಥಳದಲ್ಲಿ ನಾಲ್ಕೆ$ದು ಮಂಟಪ ಮತ್ತು ಹಲವು ಅವಶೇಷಗಳಿದ್ದು, ಅವುಗಳು ಸಹ ಶಿಥಿಲಗೊಂಡಿವೆ. ಪುರಾತನ ಅವಶೇಷಗಳ ರಕ್ಷಣೆ ಮಾಡಬೇಕಾದ ಕೆಲವರು ಹಣದಾಸೆಗೆ ಕೊಟ್ಯಾಂತರ ಬೆಲೆ ಬಾಳುವ ಭೂಮಿ ತಮ್ಮ ಹೆಸರಿಗೆ ಮಾಡಿಕೊಂಡು ಅವಶೇಷ ಕೆಡವಲು ಹುನ್ನಾರ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಪಕ್ಕದ ಜಮೀನಿನ ಮಾಲೀಕರೊಬ್ಬರು ಜಮೀನನ್ನು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಅವರಿಗೆ ಮಾರಾಟ ಮಾಡಲು ದೇವಾಲಯಕ್ಕೆ ಸೇರಿದ ಭೂಮಿಯಲ್ಲಿ ರಸ್ತೆ ಮಾಡುತ್ತಿದ್ದಾರೆ. ರಸ್ತೆಗೆ ಅಡ್ಡವಾಗುತ್ತಿದೆ ಎಂಬ ಕಾರಣಕ್ಕೆ ಮಂಟಪದ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ. ಪ್ರಶ್ನಿಸಿದರೆ ಈ ಭೂಮಿ ನಮಗೆ ಸೇರಿದ್ದು, ಭೂನ್ಯಾಯಮಂಡಳಿ ಮೂಲಕ ನಮಗೆ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಮುನಿಚಂದ್ರಪ್ಪ ಮತ್ತು ಕುಟುಂಬದವರು ತಗಾದೆ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವಾಲಯಕ್ಕೆ ಸೇರಿದ ಜಮೀನಿನ ಪಹಣಿಯಲ್ಲಿ ಬೇರೆಯವರ ಹೆಸರು ಬರುತ್ತಿದ್ದು, ಈ ಭೂಮಿ ಅಕ್ರಮವಾಗಿ ಹೆಸರಿಗೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ದೇವಾಲಯಕ್ಕೆ ಭೂಮಿ ಹಸ್ತಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಪಂ ಸದಸ್ಯ ಸುರೇಶ್ ಕುಮಾರ್, ಮುಖಂಡರಾದ ಜೀವಿಕ ರಾಮಚಂದ್ರಪ್ಪ, ಮುನಿಯಪ್ಪ, ನಾರಾಯಣಪ್ಪ, ಮುನಿಚಂದ್ರಪ್ಪ ಇತರರು ಇದ್ದರು.
"ದೇವಸ್ಥಾನದ ಭೂಮಿ ಅಥವಾ ಸರ್ಕಾರದ ಭೂಮಿ ಒತ್ತುವರಿ ಮಾಡಿಕೊಂಡು ತಮ್ಮ ಹೆಸರಿಗೆ ಪಹಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಸ್ಥಳದಲ್ಲಿ ಪುರಾತನ ಸ್ಮಾರಕಗಳು ಇದ್ದರೆ ಅವುಗಳ ರಕ್ಷಣೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು."
- ಸುಜಾತಾ
ತಹಸೀಲ್ದಾರ್, ಬಂಗಾರಪೇಟೆ
"ಸಪ್ಪಲಮ್ಮ ದೇವಾಲಯ ಇರುವ ಭೂಮಿ ಇಷ್ಟು ದಿನ ದೇವಾಲಯದ ಸ್ವತ್ತು ಎಂದು ಭಾವಿಸಿದ್ದೆವು. ಅದೇ ಕಾರಣಕ್ಕೆ ಗ್ರಾಮಸ್ಥರೆಲ್ಲ ದೇವಾಲಯ ಜೀಣೋದ್ದಾರ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಗ್ರಾಮದ ಮುನಿಚಂದ್ರಪ್ಪ ಎಂಬುವವರು ಭೂಮಿ ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ."
- ಸುರೇಶ್ ಕುಮಾರ್
ಗ್ರಾಪಂ ಸದಸ್ಯ ಆಲಂಬಾಡಿ