

ಚಿತ್ರದುರ್ಗ: ನೆಟ್ಟಿರುವ ಸಸಿಗಳನ್ನು ಜತನದಿಂದ ಕಾಪಾಡಿ ಬೆಳೆಸುವಂತೆ ಎಸ್ಪಿ ಜಿ.ರಾಧಿಕಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಲಹೆ ನೀಡಿದರು.
ಬಸವೇಶ್ವರ ನಗರದಲ್ಲಿ ಪೊಲೀಸ್ ನೂತನ ವಸತಿಗೃಹ ಆವರಣದಲ್ಲಿ ಭಾನುವಾರ ಸಸ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಗಿಡ ಮರಗಳಿಂದ ಶುದ್ಧ ಗಾಳಿಯೊಂದಿಗೆ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ವರ್ಗಾವಣೆ ಆಗುತ್ತದೇ ನಮಗ್ಯಾಕೆ ಎಂಬ ಧೋರಣೆ ಬೇಡ, ಇಲ್ಲಿ ನೀವಿರುವಷ್ಟು ದಿನಗಳ ಕಾಲ ಸಸಿಗಳನ್ನು ಚೆನ್ನಾಗಿ ಬೆಳೆಸಿ ಎಂದು ತಿಳಿಸಿದರು.
ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ನಿರ್ಲಕ್ಷೃ ಧೋರಣೆ ಬೇಡ, ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಆಯುರ್ವೇದ ಔಷಧ, ಕಷಾಯ ಸೇವನೆ, ಆವಿ ತೆಗೆದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳಿ ಎಂದರು.
ಈ ವಿಷಯದಲ್ಲಿ ಬೇಜವಾಬ್ದಾರಿ ಸಲ್ಲದು. ಮಕ್ಕಳು ಹಾಗೂ ಹಿರಿಯರ ಕಡೆ ವಿಶೇಷ ಗಮನ ಇರಲಿ. ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸದ್ಯಕ್ಕೆ ಭಾಗವಹಿಸುವುದು ಬೇಡ. ಲಸಿಕೆ ಬರುವವರೆಗೆ ಸೋಂಕು ತಗಲುದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳ ಬೇಕು ಎಂದು ತಿಳಿಸಿದರು.
ಎಎಸ್ಪಿ ಎಂ.ಬಿ.ನಂದಗಾವಿ, ಡಿವೈ ಎಸ್ಪಿಗಳಾದ ಪಾಂಡುರಂಗಪ್ಪ, ತಿಪ್ಪೇಸ್ವಾಮಿ, ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹಮದ್, ಗ್ರಾಮಾಂತರ ಠಾಣೆ ಸಿಪಿಐ ಎಸ್.ಬಾಲಚಂದ್ರನಾಯಕ್, ಡಿಎಆರ್ ಇನ್ಸ್‌ಪೆಕ್ಟರ್ ಸೋಮಶೇಖರ್, ಎಎಸ್‌ಐ ವೆಂಕಟೇಶ್ ಇತರರಿದ್ದರು.