

ಬೇಲೂರು: ಸನ್ಯಾಸಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಲಕ್ಷ್ಮೀಪುರ ಗ್ರಾಮದ ಎಲ್.ಕೆ.ವೆಂಕಟೇಶ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ರಮೇಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಪುರ ಗ್ರಾಮದ ಎಲ್.ಕೆ.ವೆಂಕಟೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಾಪಂ ಇಒ ಸತೀಶ್, ಅವಿರೋಧ ಆಯ್ಕೆ ಘೋಷಿಸಿದರು.
ಅಧ್ಯಕ್ಷ ಎಲ್.ಕೆ.ವೆಂಕಟೇಶ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಿರುವ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನೀರಿನ ಅಗತ್ಯತೆ ಹೆಚ್ಚಿದ್ದು, ಎಲ್ಲ ಗ್ರಾಮಗಳಿಗೂ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕೋಳಿ ಶಿವು, ಸದಸ್ಯರಾದ ಮೋಹನ್ ಕುಮಾರ್, ಪಾರ್ವತಿ, ರಮೇಶ್, ಜ್ಯೋತಿ, ವಿನೋದ, ಶ್ರೀಧರ್, ಪುರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಮುಖಂಡರಾದ ಪುರುಷೋತ್ತಮ್, ಗಜೇಂದ್ರ, ತೌಫಿಕ್, ದೇವರಾಜ್ ಇತರರು ಇದ್ದರು.