ಸಚಿವ ಸಂತೋಷ್ ಲಾಡ್ ಪ್ರಶ್ನೆ, ಶೆಟ್ಟರ್ ಉಳಿಸಿಕೊಳ್ಳಲು ಏನೇನು ಮಾಡಬೇಕಿತ್ತು?

IMG_20240126_211955_604.jpg
Published on

ಹುಬ್ಬಳ್ಳಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿಗೆ ಹೋಗ್ತಾರೋ ಇಲ್ಲವೋ ಅವರನ್ನೇ ಕೇಳಬೇಕು. ಜಗದೀಶ ಶೆಟ್ಟರ್ ಅವರಿಗೆ ಎಂಎಲ್ಸಿ ಮಾಡಿದ್ವಿ, ಅವರನ್ನು ಉಳಿಸಿಕೊಳ್ಳೊಕೆ ಇನ್ನೂ ಏನು ಮಾಡಬೇಕಿತ್ತು ಎಂದು ಕಾಮಿರ್ಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ ನಂತರ ಸುದ್ದಿಗಾರರ ಪ್ರಶ್ನೆಗೆ ಅವರು ಗರಂ ಆಗಿಯೇ ಪ್ರತಿಕ್ರಿಯಿಸಿದರು.

ಶೆಟ್ಟರ್ ಅವರನ್ನು ಉಳಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ ಎಂಬ ಸವದಿ ಹೇಳಿಕೆಗೆ, ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ? ಅವರನ್ನು ಪಕ್ಷಕ್ಕೆ ಕರೆದುಕೊಂಡು ಟಿಕೆಟ್ ಕೊಡಲಾಗಿತ್ತು. ಸೋತ ನಂತರ ಎಂಎಲ್ಸಿ ಮಾಡಲಾಗಿತ್ತು. ಇನ್ನೂ ಏನು ಮಾಡಬೇಕು ನನಗೆ ಗೊತ್ತಿಲ್ಲ ಎಂದರು.

ಬಿಜೆಪಿ ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯಿಸಿದ ಲಾಡ್, ನಾವು ಕಾಂಗ್ರೆಸ್ನವರು 136 ಶಾಸಕರಿದ್ದೇವೆ. ಬಿಜೆಪಿ, ಜೆಡಿಎಸ್ ಸೇರಿದರೂ 85 ಆಗ್ತಾರೆ. ಲೆಕ್ಕದ ಪ್ರಕಾರ ಹೋದರೂ 53 ಜನ ಅವರಿಗೆ ಬೇಕಾಗುತ್ತದೆ. ಅಷ್ಟು ಶಾಸಕರು ಹೋದರೆ ಮಾತ್ರ ಏನಾದರೂ ಆಗಬಹುದು. ಇದು ಸಾಧ್ಯವೇ? ಪದೇಪದೆ ಇದನ್ನೇ ಮಾತನಾಡಿ ಸಾಕಾಗಿದೆ ಎಂದು ಆಕ್ರೋಶದಿಂದ ನುಡಿದರು.

ಶ್ರೀಲಂಕಾ, ಬಾಂಗ್ಲಾ, ಆಫ್ಘಾನಿಸ್ತಾನ್ ಸರ್ಕಾರ ಬಿಳಿಸೋಕೆ ಹೇಳಿ ಅವರಿಗೆ, ಯಾಕಂದ್ರೆ ವಿಶ್ವ ಗುರು ಅಲ್ವಾ ಅವರು, ಅಲ್ಲಿ ಸರ್ಕಾರ ಮಾಡಲಿಕ್ಕೆ ಹೇಳಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರಕ್ಕೂ ಮುನ್ನ 58 ಲಕ್ಷ ಕೋಟಿ ಸಾಲ ಇತ್ತು. ದೇಶದ ಮೇಲೆ ಈಗ 175 ಲಕ್ಷ ಕೋಟಿ ಸಾಲ ಇದೆ. ಇದು ನೇರವಾಗಿ ಕೇಂದ್ರ ಸರ್ಕಾರದ ಸಾಲ. 14.70 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಆಗಿದೆ ಎಂದು ಸಂತೋಷ್ ಲಾಡ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net