ಸಂತೋಷ್ ಲಾಡ್ ಮುಖದಲ್ಲಿ ಅಫ್ಜಲ್ ಖಾನ್ ಛಾಯೆ: ಮಾಜಿ ಸಂಸದ ಪ್ರತಾಪ್ ಸಿಂಹ ಟೀಕೆ

Prathap Simha
Published on

ಮೈಸೂರು: ಮರಾಠ ಸಮುದಾಯಕ್ಕೆ ಸೇರಿದ ಸಚಿವ ಸಂತೋಷ್ ಲಾಡ್ ಮುಖದಲ್ಲಿ ಶಿವಾಜಿ ಬದಲು, ಅಫ್ಜಲ್ ಖಾನ್ ಛಾಯೆ ಎದ್ದು ಕಾಣುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಕರ್ನಾಟಕದಲ್ಲಿ ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರು ದಿನ ಬೆಳಗಾದರೆ ಕಾಗೆಯ ತರಹ ಕಾಕಾ... ಕಾಕಾ... ಅಂತಾ ಅರಚುತ್ತಾರೆ. ಸಂತೋಷ್ ಲಾಡ್ ಅವರಿಗೆ ತಾವು ಏನು ಮಾತನಾಡುತ್ತಿದ್ದಾರೆ ಎಂಬ ಜ್ಞಾನವೇ ಇಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಟೀಕಿಸಿದರು.

ಮೋದಿ ಬಗ್ಗೆ ಮಾತನಾಡದೆ ಇದ್ದರೆ ಅವರಿಗೆ ತಿಂದಿದ್ದು ಅರಗುವುದಿಲ್ಲವಾ ? ಮರಾಠ ಸಮುದಾಯಕ್ಕೆ ಸೇರಿದ ನಿಮ್ಮ ಬಾಯಲ್ಲಿ ವೀರ ಸೇನಾನಿ ಶಿವಾಜಿ ರೀತಿಯ ಮಾತು ಬರುತ್ತಿಲ್ಲ. ಬದಲಿಗೆ ಅಫ್ಜಲ್ ಖಾನ್ ಛಾಯೆ ಎದ್ದು ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಂತೋಷ್ ಲಾಡ್ ಬಹಳ ಮೇಧಾವಿಯಲ್ಲ. ಅವರೊಬ್ಬ ತಿಳಿಗೇಡಿ ಅಷ್ಟೆ. ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿಯನ್ನು ಕೇಳಿ ಎನ್ನುತ್ತಾರೆ. ಹತ್ಯೆ ಮಾಡಿದವನ ಎನ್‌ಕೌಂಟರ್‌ಗೆ ಮೋದಿ ಅನುಮತಿ ಏಕೆ ಬೇಕು ಲಾಡ್? ಒಂದು ವರ್ಷವಾಯ್ತು, ನೇಹಾಗೆ ನ್ಯಾಯ ಕೊಡಿಸಿದಿರಾ ಎಂದು ಪ್ರಶ್ನಿಸಿದರು.

ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನು ಆಯ್ತು? ಸಂತೋಷ್ ಲಾಡ್‌ಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ. ಹೊರಗಡೆ ಮಾತ್ರ ತಾನು ಬಹಳ ಸಾಚಾ ಎನ್ನುವ ರೀತಿ ಪೋಸ್ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದರು. ಇಲ್ಲದಿದ್ದರೆ ಎರಡನೇ ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುಬೇಕಿತ್ತು ಎಂದರು.

1971ರಲ್ಲಿ ಇಂದಿರಾಗಾಂಧಿ ಏನು ಕಡಿದು ಕಟ್ಟೆ ಹಾಕಿದರು. ಅವತ್ತಿನ ಯುದ್ಧದ ಗೆಲುವನ್ನು ಹಾಳು ಮಾಡಿದ್ದು, ನಿಮ್ಮ ಇಂದಿರಾಗಾಂಧಿ ಎನ್ನುವುದು ನೆನಪಿರಲಿ ಎಂದರು.

ಪಹಲ್ಗಾಮ್‌ನಿಂದ ಕನ್ನಡಿಗರನ್ನು ಕರೆದುಕೊಂಡು ಬರಲು ಅವಕಾಶ ಮಾಡಿಕೊಟ್ಟಿದ್ದು ಪ್ರಧಾನಿ ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ? ನಿಮ್ಮ ಅನಿಷ್ಟಕ್ಕೆಲ್ಲ ಮೋದಿಯೇ ಕಾರಣ ಎನ್ನುವ ರೀತಿ ಯಾಕೆ ಮಾತನಾಡ್ತೀರಿ? ನಮಗೆ ಪಾಕಿಸ್ತಾನ ಮಾತ್ರ ಶತ್ರುವಲ್ಲ. ನಮ್ಮ ಜತೆಯಲ್ಲೇ ಇಂತಹ ಹಿತಶತ್ರುಗಳು ಟೈಂ ಬಾಂಬ್ ತರಹ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಡ್ಡಿದೆ ಎಂಬ ಕೊಬ್ಬಿನಿಂದ ಸಂತೋಷ್ ಲಾಡ್ ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ನಿಮಗೆ ದುಡ್ಡು ಇರಬಹುದು, ಪತ್ರಕರ್ತರಿಗೆ ನೈತಿಕತೆ ಇದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ ಎಂದರು.

ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿಗಳನ್ನು ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ. ಪಾಕಿಸ್ತಾನದ ಉದಯಕ್ಕೆ ಕಾರಣವಾಗಿದ್ದಕ್ಕೆ ಕಾಂಗ್ರೆಸ್‌ಗೆ ತಾನೇ ಪಾಕಿಸ್ತಾನದ ಪಿತಾಮಹ ಎನ್ನುವ ಕೀರ್ತಿ ಇದೆ ಎಂದು ಲೇವಡಿ ಮಾಡಿದರು.

ಕೊತ್ತೂರು ಮಂಜುನಾಥ್‌ಗೆ ಸಿಂಧೂರಕ್ಕೂ, ಸಿಂಧೂರಿಗೂ ವ್ಯತ್ಯಾಸ ಎನೆಂದು ಗೊತ್ತಿಲ್ಲ. ಸಿಂಧೂರ, ಸಿಂಧೂರಿ ಎಂದು ಏನೇನೋ ಕಲ್ಪಿಸಿಕೊಂಡು ಕನವರಿಸುತ್ತಿದ್ದಾರೆ. ಮಂಜುನಾಥ್‌ಗೆ ಭೂಮಿಯ ಚದರ ಅಡಿ ಮಾತ್ರ ಗೊತ್ತಿರೋದು. ಅಲ್ಲದೆ ಒಂದು ಸೈಟ್ ಅನ್ನು ನಾಲ್ಕು ಜನರಿಗೆ ಮಾರಿ ಹೇಗೆ ದುಡ್ಡು ಮಾಡೋದು ಎನ್ನುವುದು ಚೆನ್ನಾಗಿ ತಿಳಿದಿದೆ. ಹಾಗಾಗಿ ದೇಶ, ಯುದ್ಧ ಇದೆಲ್ಲ ಅವರಿಗೆ ಅರ್ಥವಾಗಲ್ಲ ಎಂದು ಕುಟುಕಿದರು.

ಅಂಬೇಡ್ಕರ್ ಪ್ರಧಾನಿ ಆಗಬೇಕಿತ್ತು:

ಡಾ.ಬಿ.ಆರ್. ಅಂಬೇಡ್ಕರ್ ಸ್ವಾತಂತ್ರೃ ನಂತರ ಈ ದೇಶದ ಪ್ರಧಾನಿ ಆಗಿದ್ದರೆ, ದೇಶಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಮರ ಮನಸ್ಥಿತಿ ಅಂಬೇಡ್ಕರ್ ಅವರಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು ಎಂದರು.

ಅಂಬೇಡ್ಕರ್ ಅವರು ಮುಸ್ಲಿಮರ ಮನಸ್ಥಿತಿಯ ಬಗ್ಗೆ ಬಹಳ ಸ್ಪಷ್ಟವಾಗಿ ಅಂದೇ ಹೇಳಿದ್ದರು. ಅಂಬೇಡ್ಕರ್ ಅವರ ಫೋಟೋವನ್ನು ಗಾಂಧೀಜಿಯ ಜತೆಯಲ್ಲಿ ನೋಟ್ ಮೇಲೆ ಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬರೀ ಮೀಸಲಾತಿ ದೃಷ್ಟಿಕೋನದಿಂದಷ್ಟೇ ಅಂಬೇಡ್ಕರ್ ಅವರನ್ನು ನೋಡುವುದನ್ನು ಬಿಡಬೇಕು. ಈಗ ಎಲ್ಲರಿಗೂ ಅಂಬೇಡ್ಕರ್ ಅವರ ವಿಶಾಲವಾದ ದೃಷ್ಟಿಕೋನ ಅರ್ಥವಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net