

ಹುಬ್ಬಳ್ಳಿ: ಪಂಡಿತ ಸತೀಶ್ ಹಂಪಿಹೊಳಿ ಮ್ಯುಸಿಕ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆ. 25ರಂದು ಆಯೋಜಿಸಿರುವ ಸಂಗೀತ ಶ್ರಾವಣ ಕಾರ್ಯಕ್ರಮದಲ್ಲಿ ಖ್ಯಾತ ತಬಲಾ ವಾದಕ ಪಂಡಿತ್ ಸಂತೋಷ್ ಕುಲಕರ್ಣಿ ಅವರಿಗೆ ಸದ್ಗುರುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದ್ದು, ಹಿರಿಯ ನ್ಯಾಯವಾದಿ ಎಚ್. ಸುಬ್ರಹ್ಮಣ್ಯ ಜೋಯಿಸ್ ಅವರು ಪ್ರದಾನ ಮಾಡುವರು. ನೃತ್ಯ ಕಲಾವಿದೆ ಹಾಗೂ ನಟಿ ಯಮುನಾ ಶ್ರೀನಿಧಿ ಕಾರ್ಯಕ್ರಮ ಉದ್ಘಾಟಿಸುವರು.
ಮಧ್ಯಾಹ್ನ 3.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂತೋಷ್ ಕುಲಕರ್ಣಿ ಅವರ ತಬಲಾ ಸೋಲೋ ಕಾರ್ಯಕ್ರಮ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.