ದೇವಪ್ಪಜ್ಜನ ಹಂತಕ ಸಂತೋಷ ಬೋಜಗಾರ

h23-santosh bojagara
Published on

ಹುಬ್ಬಳ್ಳಿ: ಇಲ್ಲಿಯ ಈಶ್ವರ ನಗರದ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಮಹಾದೇವಪ್ಪ ವನಹಳ್ಳಿ (63) (ದೇವಪ್ಪಜ್ಜ)ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಹುಬ್ಬಳ್ಳಿಯ ಕಮರಿಪೇಟ್ ನಿವಾಸಿ ಸಂತೋಷ ತಿಪ್ಪಣ್ಣ ಬೋಜಗಾರ (44) ಎಂಬಾತನನ್ನು ಚನ್ನಮ್ಮ ವೃತ್ತದಲ್ಲಿ ಸೋಮವಾರ ರಾತ್ರಿ ಬಂಧಿಸಲಾಗಿದೆ ಎಂದರು.
ದೇವಸ್ಥಾನದ ಧರ್ಮದರ್ಶಿಯನ್ನು ಹತ್ಯೆ ಮಾಡಿದ್ದು ನಾನೆ. ನನ್ನ ಕೆಲ ಸಂಬಂಧಿಕರು ದೇವಪ್ಪಜ್ಜನ ಜತೆಗೆ ಸೇರಿಕೊಂಡು ನನಗೆ ಹಾಗೂ ನನ್ನ ಕುಟುಂಬದವರ ವಿರುದ್ಧ ಪೂಜೆ ಮಾಡಿಸಿದ್ದು, ಅದರಿಂದಾಗಿ ನಮ್ಮೆಲ್ಲರ ಆರೋಗ್ಯದಲ್ಲಿ ಏರುಪೇರಾಗಿ ಕೆಲವರು ಮೃತಪಟ್ಟಿದ್ದಾರೆ. ಇದರಿಂದ ಹತ್ಯೆಯಾದ ದೇವೇಂದ್ರಪ್ಪ (ದೇವಪ್ಪಜ್ಜ)ನೇ ಕಾರಣವೆಂದು ಭಾವಿಸಿ ಕೊಲೆ ಮಾಡಿದ್ದೇನೆಂದು ವಿಚಾರಣೆ ವೇಳೆ ಸಂತೋಷ ಒಪ್ಪಿಕೊಂಡಿದ್ದಾನೆ ಎಂದು ವಿವರಿಸಿದರು.
ದೇವೇಂದ್ರಪ್ಪನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲ ದಾಖಲಾಗಿದ್ದ ಪ್ರಕರಣದ ಕೃತ್ಯವನ್ನೂ ಸಹ ತಾನೇ ಮಾಡಿರುವುದಾಗಿ ಸಂತೋಷ ಒಪ್ಪಿಕೊಂಡಿದ್ದಾನೆ. ಕಳೆದ ಆರೂವರೆ ವರ್ಷದಿಂದ ಕೊಲೆ ಮಾಡಬೇಕೆಂದು ನಿರ್ಧಾರ ಮಾಡಿದ್ದಾಗಿಯೂ ವಿಚಾರಣೆ ವೇಳೆ ಹೇಳಿದ್ದಾನೆ ಎಂದರು.
ದೇವಸ್ಥಾನದ ಸುತ್ತಮುತ್ತಲಿನ 180ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿಯ ಗುರುತು ಪತ್ತೆ ಹಚ್ಚಿ, ಸಂಶಯಾಸ್ಪದ ವ್ಯಕ್ತಿಯ ಮಾಹಿತಿ ನೀಡುವಂತೆ ಮನವಿ ಮಾಡಿದ್ದೆವು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಚನ್ನಮ್ಮ ಸರ್ಕಲ್ ಸುತ್ತಮುತ್ತ ಆರೋಪಿ ಓಡಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದರು.
ಆರೋಪಿಯನ್ನು ಬಂಧಿಸುವಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ನವನಗರ ಠಾಣೆಯ ಇನ್‌ಸ್ಪೆಕ್ಟರ್ ಸಮ್ಮಿವುಲ್ಲಾ ಕೆ. ಹಾಗೂ ಸಿಬ್ಬಂದಿ ನೇತೃತ್ವದ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಭೇದಿಸಿದ್ದು, ಈ ಕಾರ್ಯ ಪ್ರಶಂಸಿಸಿ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net