ಸತ್ತ 40 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆ; ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ಸಂತೋಷ್​ ಶವ ರವಾನೆ

Santhosh Patil
Published on

ಉಡುಪಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಹೊರಿಸಿ, ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಶವವನ್ನು ಕೊನೆಗೂ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.

ನಿನ್ನೆ ಉಡುಪಿಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಬಳಿಯ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್​ನ ರೂಂ ನಂಬರ್ 207ರಲ್ಲಿ ಸಂತೋಷ್​ ಶವವಾಗಿ ಪತ್ತೆಯಾಗಿದ್ದರು. ಆದರೆ ನಿನ್ನೆಯೇ ಅವರ ಶವಪರೀಕ್ಷೆ ಮಾಡಿಸಲು ಕುಟುಂಬಸ್ಥರಿಂದ ವಿರೋಧವಿತ್ತು. ಸಂತೋಷ್ ಸಹೋದರ ಬರುವವರೆಗೂ ಶವ ಲಾಡ್ಜ್​ನಲ್ಲೇ ಇರಲಿ ಎಂದು ಅವರ ಪತ್ನಿಯೂ ಒತ್ತಾಯಿಸಿದ್ದರು. ಹೀಗಾಗಿ ನಿನ್ನೆ ಪೋಸ್ಟ್​ ಮಾರ್ಟಂ ಆಗಿರಲಿಲ್ಲ.

ಇಂದು ಸಂತೋಷ್ ಸಾವಿಗೀಡಾದ ಸುಮಾರು 40 ಗಂಟೆಗಳ ಬಳಿಕ ಮಣಿಪಾಲ ಆಸ್ಪತ್ರೆಯ ಪಕ್ಕದಲ್ಲಿರವು ಪೋಸ್ಟ್​ ಮಾರ್ಟಂ ಕೇಂದ್ರಕ್ಕೆ ಶವವನ್ನು ಕೊಂಡೊಯ್ಯಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ಉಡುಪಿಯಿಂದ ಮಣಿಪಾಲಕ್ಕೆ ಸಂತೋಷ್ ಶವ ತರಲಾಗಿದ್ದು, ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಪಾಟೀಲ್ ಕುಟುಂಬಸ್ಥರೂ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net