

ಸರಗೂರು: ಪಟ್ಟಣದ ಸಂತೇಮಾಸ್ತಮ್ಮನ ದೇವಸ್ಥಾನದಲ್ಲಿ ಫೆ.23ರಂದು ನಡೆಯಲಿರುವ ಕೊಂಡೋತ್ಸವದ ಜಾತ್ರಾ ಮಹೋತ್ಸವದಲ್ಲಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಹಸೀಲ್ದಾರ್ ರುಕಿಯಾ ಬೇಗಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ನಾನಾ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಿಂದ ನಿಂತಿದ್ದ ಸಂತೇಮಾಸ್ತಮ್ಮನ ಕೊಂಡೋತ್ಸವವನ್ನು ಭೀಮನಕೊಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವ ಮುಗಿದ ಮರುದಿನ ತಂಗಳು ಜಾತ್ರೆಯನ್ನಾಗಿ ಆಚರಿಸಲಾಗುವುದು. ಪಟ್ಟಣದ ಎಲ್ಲಾ ಸಮುದಾಯದವರು ಒಗ್ಗೂಡಿ ಜಾತ್ರೆ ಯಶಸ್ವಿಗೆ ಸಹಕರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಹಿಂದಿನಿಂದಲೂ ಸಂತೇಮಾಸ್ತಮ್ಮನ ಜಾತ್ರೆ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿತ್ತು. ಇದೇ ರೀತಿ ಮುಂದಿನ ದಿನಗಳಲ್ಲಿಯೂ ನಡೆದುಕೊಂಡು ಹೋಗಲು ಸರಗೂರಿನ ನಿವಾಸಿಗಳ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಪಿಎಸ್‌ಐ ಮಧು ಮಾತನಾಡಿ, ಎಲ್ಲ ಸಮುದಾಯದವರು ಒಗ್ಗೂಡಿ ಜಾತ್ರೆ ನಡೆಯಲು ಅವಕಾಶ ಮಾಡಿಕೊಡಿ. ಜಾತ್ರಾ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ರುಕಿಯಾ ಬೇಗಂ ಮಾತನಾಡಿದರು. ಪಿಎಸ್‌ಐ ಮಧು, ಸಿಬ್ಬಂದಿ ಇಮ್ರಾನ್ ಅಹಮದ್, ನಾಗನಾಯಕ, ಚಂದ್ರು, ಶೋಭಾ, ಆಶಾ, ಶಿವರಾಜು, ಆನಂದ್‌ಮತ್ತಿತರರಿದ್ದರು.