ಮುಂದಿನ ವಾರ ಸಂತೆಕಟ್ಟೆ ಮಾರುಕಟ್ಟೆ ಉದ್ಘಾಟನೆ

santhekatte new
Published on

ಉಡುಪಿ: ಸಂತೆಕಟ್ಟೆಯಲ್ಲಿ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಿ ವರ್ಷ ಕಳೆದಿದ್ದು ಮುಂದಿನ ವಾರ ಉದ್ಘಾಟನೆಯಾಗಲಿದೆ.

ಗೋಪಾಲಪುರ ವಾರ್ಡ್‌ನ ಮೌಂಟ್ ರೋಸರಿ ಚರ್ಚ್ ಎದುರಿನ ವಿಶಾಲ ಜಾಗದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಈ ಸಂತೆ ಮಾರುಕಟ್ಟೆ ವ್ಯವಸ್ಥಿತವಾಗಿದ್ದು ಎತ್ತರದ ಕಟ್ಟೆಗಳು ಹಾಗೂ ಕಾಂಕ್ರೀಟ್ ನೆಲಹಾಸಿನಿಂದ ಪೂರ್ಣ ನವೀಕರಣಗೊಂಡು ಒಂದೂವರೆ ವರ್ಷ ಕಳೆದಿದೆ. 17,500 ಚದರ ಅಡಿ ಪ್ರದೇಶದಲ್ಲಿ 99.5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಮಾರುಕಟ್ಟೆ ನಿರ್ಮಿಸಲಾಗಿದೆ. ಏಕಕಾಲದಲ್ಲಿ 85 ಮಂದಿ ಕುಳಿತು ವ್ಯಾಪಾರ ಮಾಡಬಹುದು. ನಗರಸಭೆ ಸಾಕಷ್ಟು ಅನುಕೂಲಕರ ವ್ಯವಸ್ಥೆ ಕಲ್ಪಿಸಿದೆ.

ಪ್ರತ್ಯೇಕ ಶೌಚಗೃಹ, ಕೊಳಚೆ ನೀರು ಹರಿಯಲು ಚರಂಡಿ, ವಿದ್ಯುದ್ದೀಪ, ಇಂಟರ್‌ಲಾಕ್, ನೀರು ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಕೆಲಸಗಳೂ ಪೂರ್ಣಗೊಂಡು ತಿಂಗಳ ಹಿಂದೆ ಕಂದಾಯ ಇಲಾಖೆಗೆ ಹಸ್ತಾಂತರವಾಗಿದೆ. ಮುಂದಿನ ವಾರದಿಂದ ಹೊಸ ಮಾರುಕಟ್ಟೆಯಲ್ಲಿ ವಾರದ ಸಂತೆ ನಡೆಯಲಿದೆ ಎಂದು ನಗರಸಭೆ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿಯಲ್ಲೆ ಸಂತೆ

ಸಂತೆಕಟ್ಟೆ ವಾರದ ಸಂತೆಗೆ ಸಾಕಷ್ಟು ಹೆಸರುವಾಸಿ. ಸುತ್ತಮುತ್ತಲಿನ ಗ್ರಾಮ ಜನ, ಉಡುಪಿ ನಗರ ಭಾಗದಿಂದಲೂ ಜನ ವಾರದ ಸಂತೆಯಂದು ಸಂತೆಕಟ್ಟೆಗೆ ಬರುತ್ತಿದ್ದರು. ಕೆಲವು ಸಮಯಗಳಿಂದ ಸಂತೆ ಮಾರುಕಟ್ಟೆ ಜಿಲ್ಲದೆ ಜಂಕ್ಷನ್ ಸಮೀಪ ರಸ್ತೆ, ಫುಟ್‌ಪಾತ್ ಮೇಲೆಯೇ ಸಂತೆ ನಡೆಯುತ್ತಿತ್ತು. ಇದರಿಂದ ಭಾನುವಾರದ ಸಂಚಾರ ಸಮಸ್ಯೆ ಪ್ರಮುಖ ಕಾರಣವಾಗುತ್ತಿತ್ತು. ವಾಹನ ಓಡಾಟಕ್ಕೆ, ಸಾರ್ವಜನಿಕರಿಗೆ, ವ್ಯಾಪಾರಿಗಳಿಗೂ ಇದು ಸಾಕಷ್ಟು ಕಿರಿಕಿರಿಯಾಗುತ್ತಿತ್ತು.

ಸಂತೆಕಟ್ಟೆಯ ನೂತನ ಸಂತೆ ಮಾರುಕಟ್ಟೆಯನ್ನು ಮುಂದಿನ ವಾರ ಉದ್ಘಾಟನೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಡಿ.13ರಂದು ಭಾನುವಾರದ ಸಂತೆಯು ಸಂತೆಕಟ್ಟೆಯ ನೂತನ ಮಾರುಕಟ್ಟೆ ಪ್ರದೇಶದಲ್ಲಿ ನಡೆಯಲಿದೆ. ಇಷ್ಟು ವಾರ ಜನರಿಗೆ, ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗಲಿದೆ. ಈ ಹಿಂದಿನಿಂದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದ ವ್ಯಾಪಾರಿಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಉಳಿದವರಿಗೆ ಆನಂತರ ಅವಕಾಶ ಕಲ್ಪಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.

ಸುಮಿತ್ರಾ ನಾಯಕ್, ಉಡುಪಿ ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net