

ಮದ್ದೂರು: ನೂರಾರೂ ವರ್ಷಗಳ ಇತಿಹಾಸ ಹೊಂದಿದ್ದ ತಾಲೂಕಿನ ಕೌಡ್ಲೆ ಗ್ರಾಮದ ಸಂತೆ ನ.10ರಿಂದ ಪುನರ್‌ಆರಂಭಗೊಳ್ಳಲಿದೆ.
ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿತ್ತು. ತಾಲೂಕಿನ ಗಡಿಭಾಗವಾಗಿರುವುದರಿಂದ ಸುತ್ತಮುತ್ತಲ ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ಜನರು ತರಕಾರಿ, ಸೊಪ್ಪು ಖರೀದಿಗೆಂದು ಸಂತೆಗೆ ಆಗಮಿಸುತ್ತಿದ್ದರು. ಮಾತ್ರವಲ್ಲದೆ ರೈತರು ತಾವು ಬೆಳೆದ ಹಾಗೂ ಕೆಲವರು ಹೊರಗಿನಿಂದ ತರಕಾರಿ, ಸೊಪ್ಪನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಪ್ರತಿ ವಾರ ಸಂತೆ ನಡೆಯುತ್ತಿದ್ದರಿಂದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಕೌಡ್ಲೆ ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಮಾಡಲಾಗುತ್ತಿತ್ತು.
ಆದರೆ ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ಎದುರಾದ ಹಿನ್ನೆಲೆಯಲ್ಲಿ ಸಂತೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಕರೊನಾ ಕಡಿಮೆಯಾದರೂ ಸಂತೆ ಪ್ರಾರಂಭವಾಗಿರಲಿಲ್ಲ. ಇದರಿಂದಾಗಿ ಜನರಿಗೆ ಸಮಸ್ಯೆಯಾಗಿತ್ತು. ಮಾತ್ರವಲ್ಲದೆ ದೂರದ ಕೊಪ್ಪಕ್ಕೆ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂನಲ್ಲಿ ಚರ್ಚೆ ನಡೆಸಿ ಸಂತೆ ಪುನರ್‌ಆರಂಭಿಸಲು ತೀರ್ಮಾನಿಸಲಾಗಿದೆ. ಅದರಂತೆ 10ರಂದು ಬೆಳಗ್ಗೆ 10ಗಂಟೆಗೆ ದೇವಸ್ಥಾನದ ಆವರಣದಲ್ಲಿ ಸಂತೆಗೆ ಪುನರ್ ಚಾಲನೆ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಪ್ರೇಮ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.