

ಕಡೂರು: ವ್ಯಾಸಂಗದ ಜತೆಗೆ ವ್ಯಾವಹಾರಿಕ ಜ್ಞಾನ ಅರಿಯಲು ಮಕ್ಕಳ ಸಂತೆ ಪೂರಕವಾಗಲಿದೆ ಎಂದು ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ಪಟ್ಟಣದ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಅವರು ಉನ್ನತ ಸ್ಥಾನ ಪಡೆಯಬೇಕು ಎಂಬ ಆಸೆಯಲ್ಲಿ ಅವರಿಗೆ ಜೀವನದ ನೈತಿಕತೆ ಕಲಿಸುವಲ್ಲಿ ಪಾಲಕರು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಅತ್ಯಗತ್ಯ ಜೀವನಾನುಭವ ದೊರೆಯಬೇಕೆಂಬ ಆಶಯದಿಂದ ಮಕ್ಕಳ ಸಂತೆ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ನಮ್ಮ ಹಿರಿಯರು ಅಗತ್ಯ ದಿನಬಳಕೆ ವಸ್ತುಗಳನ್ನು ಹೇಗೆ ತರುತ್ತಿದ್ದರು, ಅದನ್ನು ತರಲು ಎಷ್ಟು ಕಷ್ಟಪಡುತ್ತಿದ್ದರು ಎಂಬುದನ್ನು ಮಕ್ಕಳಿಗೆ ತಿಳಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಶಾಲೆ ಕಾರ್ಯದರ್ಶಿ ಸಿ.ಬಿ.ಗಿರೀಶ್ ಮಾತನಾಡಿ,ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಇದರ ಜತೆಯಲ್ಲಿ ವ್ಯವಹಾರ ಜ್ಞಾನ ತಿಳಿಯಲು ಮಕ್ಕಳ ಸಂತೆ ಎಂಬ ಪರಿಕಲ್ಪನೆಯಲ್ಲಿ ಶಾಲೆ ಮಕ್ಕಳಿಗೆ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಹೆಚ್ಚು ಮಕ್ಕಳು ಉತ್ಸುಕರಾಗಿ ಸಂತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ವಿದ್ಯಾರ್ಥಿಗಳೇ ಸ್ವತಃ ತರಕಾರಿ ಮತ್ತಿತರ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡಿದರು. ತರಕಾರಿಗಳನ್ನು ತೂಕ ಮಾಡುವ, ಲಾಭ ನಷ್ಟ ಮುಂತಾದ ವಿಷಯಗಳ ಬಗ್ಗೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಎಪಿಎಂಸಿ ಕಾರ್ಯದರ್ಶಿ ಚೈತ್ರಾ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಡಾ.ರಾಚಪ್ಪ, ಉದ್ಯಮಿ ಮಹೇಶ್ ಇತರರಿದ್ದರು.