ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆಯಾಗಲಿ: ರೈತನಾಯಕಿ ಸುನಂದಾ ಜಯರಾಂ ಆಗ್ರಹ

Raytha
Published on

ಮಂಡ್ಯ: ಅತ್ಯಾಚಾರ ನಡೆಸಿದ ವ್ಯಕ್ತಿಗಳಿಗೆ ಸರಿಯಾದ ಪ್ರಮಾಣದಲ್ಲಿ ಶಿಕ್ಷೆ ಆಗಿದ್ದರೆ ಮಳವಳ್ಳಿಯಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸುತ್ತಿರಲಿಲ್ಲ. ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ ಎಂದು ರೈತ ನಾಯಕಿ ಸುನಂದಾ ಜಯರಾಂ ಬೇಸರ ವ್ಯಕ್ತಪಡಿಸಿದರು.

ನಗರದ ಸರ್ ಎಂ.ವಿ. ಪ್ರತಿಮೆ ಎದುರು ರಾಜ್ಯ ರೈತ ಸಂಘ(ಮೂಲ ಸಂಘಟನೆ)ದಿಂದ ಆಯೋಜಿಸಿದ್ದ ಕಲ್ಮನೆ ಕಾಮೇಗೌಡ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿಗೆ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು. ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಣ್ಣಿಗೆ ಕಾಣುತ್ತಿರುವುದು ಕಡಿಮೆ ಪ್ರಕರಣಗಳು ಮಾತ್ರ. ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದನ್ನು ಗುರುತಿಸಿ ಅಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿ ವಿರುದ್ಧ ಕೂಡಲೇ ಚಾರ್ಜ್‌ಶೀಟ್ ಹಾಕಬೇಕು. ಇಂತಹ ಪೈಶಾಚಿಕ ಕೃತ್ಯ ಎಸಗುವವರಿಗೆ ತಕ್ಕ ಶಿಕ್ಷೆ ಆಗಬೇಕು. ಮಳವಳ್ಳಿಯಲ್ಲಿ ಚಿಕ್ಕ ಹೆಣ್ಣುಮಗುವನ್ನು ಬಿಡದೆ ಅತ್ಯಾಚಾರ ಎಸಗಿದವನಿಗೆ ಸಾರ್ವಜನಿಕವಾಗಿ ನೇಣುಗಂಬಕ್ಕೆ ಹಾಕಬೇಕು. ಹೆಣ್ಣು ಎನ್ನುವ ಒಂದು ಜೀವ ಇಂತಹ ಸಮಾಜದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಜಿಲ್ಲೆಯ ಹಲಗೂರು ಸೇರಿದಂತೆ ಹಲವು ಕಡೆ ಅತ್ಯಾಚಾರ ನಡೆಯುತ್ತಿರುವುದು ಬೇಸರ ತರಿಸಿದೆ. ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಇಂತಹ ಅಮಾನವೀಯ ಘಟನೆಗಳನ್ನು ತಡೆಯುವ ಕೆಲಸ ಆಗಬೇಕು. ಸರ್ಕಾರ ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಲಿ ಎಂದು ಒತ್ತಾಯಿಸಿದರು.

ಇನ್ನು ಕಲ್ಮನೆ ಕಾಮೇಗೌಡ ಅವರ ಬಗ್ಗೆ ಮಾತನಾಡಲು ಪದಗಳೇ ಇಲ್ಲ. ಅವರ ಮನೆಯನ್ನು ನೋಡಿದರೆ ಗೊತ್ತಾಗುತ್ತದೆ ಕಾಮೇಗೌಡ ಅವರು ಎಷ್ಟು ಸ್ವಾಭಿಮಾನಿ ಎಂಬುದು. ಇಂತಹ ಪರಿಸರ ಪ್ರೇಮಿಗೆ ಗೌರವ ಕೊಡಲು ಜಿಲ್ಲಾಡಳಿತ ತಕ್ಷಣವೇ ಯಾವುದಾದರೂ ರಸ್ತೆ ಅಥವಾ ವೃತ್ತಕ್ಕೆ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಜಿಲ್ಲೆಯ ಹೆಮ್ಮೆಯ ಪುರುಷ ಕಾಮೇಗೌಡರು ಕುರಿ ಮೇಯಿಸಿಕೊಂಡು ಕೆರೆ ಕಟ್ಟಿಸಿದ್ದಾರೆ. ಯಾವುದೇ ಅನುದಾನವಿಲ್ಲದೆ ಶ್ರಮ ವಹಿಸಿ ಜೀವಜಲ ಉಳಿಸಲು ಬೆಟ್ಟದ ಬಯಲಿನಲ್ಲಿ ಕಷ್ಟಪಟ್ಟಿದ್ದಾರೆ. ಸರ್ಕಾರವೇ ಅಂತ್ಯಸಂಸ್ಕಾರ ಮಾಡಬೇಕಿತ್ತು. ಕೇವಲ ಸಮಾಧಾನದ ಮಾತನಾಡಿರುವುದು ದುರಂತ. ಇನ್ನಾದರೂ ಅವರಿಗೆ ಅವಮಾನ ಮಾಡುವುದನ್ನು ನಿಲ್ಲಿಸಿ ಅವರ ಕುಟುಂಬಕ್ಕೆ ನೆರವಾಗುವಂತೆ ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಕೆ.ಬೋರಯ್ಯ, ಬೋರಾಪುರ ಶಂಕರೇಗೌಡ, ಮಂಜೇಶ್‌ಗೌಡ, ರಾಮಲಿಂಗೇಗೌಡ, ವೈ.ಕೆ.ರಾಮೇಗೌಡ, ಇಂಡುವಾಳು ಬಸವರಾಜು, ವಿ.ಸಿ.ಉಮೇಶ್, ಅಂಬುಜಮ್ಮ, ಡಿ.ಎನ್.ಲಿಂಗೇಗೌಡ, ಸುರೇಶ್ ನಾಗಮಂಗಲ, ಕೆಂಪೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net